ಬಹು ಕೋಟಿ ಮೌಲ್ಯದ ಮೂತ್ರಪಿಂಡ ಕಸಿ ಜಾಲದ ಸೂತ್ರಧಾರ ಅಮಿತ್‌ಕುಮಾರ್ ಕೆನಡಾಗೆ ಪಲಾಯನ ಮಾಡಿದ್ದಾನೆಂದು ಶಂಕಿಸಲಾಗಿದೆ. ದೇಶದ ಬಡಜನರಿಂದ ನೂರಾರು ಮೂತ್ರಪಿಂಡಗಳನ್ನು ಅಕ್ರಮವಾಗಿ ಖರೀದಿಸಿದ ಆರೋಪದ ಮೇಲೆ ಡಾ.ಹಾರರ್ ಎಂದೇ ಹೆಸರಾದ ಕುಮಾರ್ ಕೆನಡಾದ ಅಜ್ಞಾತ ಸ್ಥಳದಿಂದ ಕಾರ್ಯಾಚರಣೆ ನಡೆಸುತ್ತಿದ್ದಾನೆಂದು ಕೆನಡಾದ ದಿನಪತ್ರಿಕೆ ನ್ಯಾಷನಲ್ ಪೋಸ್ಟ್ ಮಂಗಳವಾರ ವರದಿ ಮಾಡಿತ್ತು. ಕೆನಡಾದ ಅಧಿಕಾರಿಗಳಿಗೆ ಪ್ರಸಕ್ತ ಭಾರತೀಯ ಪೊಲೀಸರ ತನಿಖೆ ಬಗ್ಗೆ ಸೀಮಿತ ಮಾಹಿತಿಯಷ್ಟೇ ಸಿಗುತ್ತಿರುವುದಾಗಿ ಕೆನಡಾದ ಪೊಲೀಸ್ ವಕ್ತಾರ ತಿಳಿಸಿದರು.
ಈ ಪ್ರಕರಣದ ಬಗ್ಗೆ ಒಟ್ಟಾವಾ ಇಂಟರ್‌ಪೋಲ್ ನವದೆಹಲಿಯ ಇಂಟರ್‌ಪೋಲ್ ಜತೆ ಸಂಪರ್ಕ ಹೊಂದಿದೆ. ಎಂದು ಕೆನಡಾ ಮೌಂಟನ್ ಪೊಲೀಸ್ ಸಾರ್ಜಂಟ್ ಸಿಲ್ವಿಯ ಟ್ರೆಂಬ್ಲಿ ತಿಳಿಸಿದರು. ಕುಮಾರ್ ದೇಶದಿಂದ ಪಲಾಯನ ಮಾಡಿರಬಹುದೆಂಬ ಶಂಕೆಯಿಂದ ಅವನ ಜಾಡನ್ನು ಪತ್ತೆಹಚ್ಚಲು ಕಟ್ಟೆಚ್ಚರದ ಇಂಟರ್‌ಪೋಲ್ ನೋಟೀಸ್‌ಗೆ ಹರ್ಯಾಣ ಪೊಲೀಸ್ ಕೋರಿಕೆ ಸಲ್ಲಿಸಿದೆ.
ಕುಮಾರ್ ಅಗತ್ಯ ವೈದ್ಯಕೀಯ ಡಿಗ್ರಿಗಳನ್ನು ಹೊಂದಿಲ್ಲವೆಂದು ಕೂಡ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಕೇಂದ್ರವು ಸಿಬಿಐ ತನಿಖೆಗೆ ಕೋರುವುದಾಗಿ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ತಿಳಿಸಿದ್ದಾರೆ.
|