ಚೀನವು ದಶಕಗಳಲ್ಲೇ ಭೀಕರವಾದ ಹಿಮಪಾತವನ್ನು ನಿಭಾಯಿಸಲು ಹೋರಾಡುತ್ತಿದ್ದು, ಚಳಿಗಾಲದ ಬೆಳೆಗಳು ನಾಶವಾಗಿರುವುದರಿಂದ ಭವಿಷ್ಯದಲ್ಲಿ ಆಹಾರದ ಅಭಾವ ತಲೆದೋರಬಹುದೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜನರಿಗೆ ಮನದಟ್ಟು ಮಾಡಲು ಸರ್ಕಾರ ಯತ್ನಿಸುತ್ತಿದ್ದು, ಸತ್ತಿರುವ ಮೂರು ಮಂದಿಯನ್ನು ಕ್ರಾಂತಿಕಾರಿ ಹುತಾತ್ಮರು ಎಂದು ಹೆಸರಿಸಿದೆ.
ಇನ್ನೂ ಹೆಚ್ಚು ಹಿಮಪಾತ ಸಂಭವಿಸಬಹುದೆಂದು ಹವಾಮಾನ ಮುನ್ಸೂಚಕರು ಎಚ್ಚರಿಸಿದ್ದು, ಪ್ರವಾಸ ಮಾಡದಂತೆ ಜನತೆಗೆ ಎಚ್ಚರಿಸಿದೆ. ಕೆಟ್ಟ ಹವಾಮಾನದಿಂದ ಹೊಸ ವರ್ಷದ ರಜಾಗೆ ಊರಿಗೆ ಬರುವ ಲಕ್ಷಾಂತರ ಚೀನಿಯರ ಮೇಲೆ ಪರಿಣಾಮ ಉಂಟಾಗಿದೆ.
ಬೆಳೆಗಳ ನಾಶದಿಂದ ಆಹಾರ ಬೆಲೆಗಳು ಏರಿ ಇಂಧನದ ಅಭಾವ ತಲೆದೋರಬಹುದೆಂದು ವಿಶ್ಲೇಷಕರು ಹೇಳುತ್ತಾರೆ. ಹುನಾನ್ ಪ್ರಾಂತ್ಯದಲ್ಲಿ ದಟ್ಟವಾಗಿ ಆವರಿಸಿದ್ದ ಮಂಜನ್ನು ತೆಗೆಯುವ ಭರದಲ್ಲಿ ಅಸುನೀಗಿದ ಮೂವರು ವಿದ್ಯುಚ್ಛಕ್ತಿ ನೌಕರರನ್ನು ಕ್ರಾಂತಿಕಾರಿ ಹುತಾತ್ಮರು ಎಂದು ಘೋಷಿಸಲಾಗಿದೆ.
|