ಡಂಬುಲಾ ನಗರದ ಬಳಿ ಶನಿವಾರ ಬೆಳಿಗ್ಗೆ ಸಂಭವಿಸಿದ ಶಕ್ತಿ ಶಾಲಿ ಬಾಂಬ್ ಸ್ಪೋಟಕ್ಕೆ 20 ಜನರು ಬಲಿಯಾಗಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಡಂಬುಲಾ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಬಸ್‌ನಲ್ಲಿ ತಮಿಳು ಉಗ್ರರ ಶಕ್ತಿಶಾಲಿ ಬಾಂಬ್ ಇಟ್ಟಿದ್ದರು ಎಂದು ಶಂಕಿಸಲಾಗಿದೆ.
ಕ್ಯಾಂಡಿ ನಗರದಿಂದ ವಾಯುವ್ಯ ಪ್ರಾಂತ್ಯದ ಅನುರಾಧಪುರದತ್ತ ಬಸ್ ಸಾಗುತ್ತಿತ್ತು. ಬಾಂಬ್ ಸ್ಫೋಟದ ಭೀಕರತೆಗೆ ಬಸ್ ಪೂರ್ಣ ಜಖಂಗೊಂಡಿದ್ದು. ಬದುಕುಳಿದವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಿಲಿಟರಿ ವಕ್ತಾರ ಬ್ರಿಗೇಡಿಯರ್ ಉದಯ ನಾನಾಯಕ್ಕರ ಮಾಹಿತಿ ನೀಡಿದ್ದಾರೆ.
ಅನುರಾಧಪುರದಲ್ಲಿ ನಡೆಯುವ ನೆಲಮ್ ಮಾಲ್ ಪೂಜೆಯಲ್ಲಿ ಪಾಲ್ಗೊಳ್ಳಲು ಭಕ್ತರು ದುರಾದೃಷ್ಟದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಶ್ರೀಲಂಕಾ ಮಿಲಿಟರಿ ಪಡೆಯ ದಾಳಿಯನ್ನು ದ್ವೀಪ ರಾಷ್ಟ್ರದ ಉತ್ತರ ಭಾಗದಲ್ಲಿ ತಡೆಯಲಾಗದ ತಮಿಳು ಉಗ್ರರು ಈ ರೀತಿಯ ಹಿಂಸಾಚಾರಕ್ಕೆ ಮುಂದಾಗುತ್ತಿರುವುದು ಬಾಂಬ್ ಸ್ಫೋಟದ ಕೃತ್ಯದಿಂದ ಸಾಬೀತಾಗಿದೆ ಎಂದು ಆಪಾದಿಸಿದರು.
ಫೆಬ್ರವರಿ ನಾಲ್ಕರಿಂದ ಶ್ರೀಲಂಕಾ ತನ್ನ 60ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದ್ದು, ಈ ನಿಟ್ಟಿನಲ್ಲಿ ರಾಜಧಾನಿ ಕೊಲೋಂಬೊ ಸಹಿತ ಇತರ ನಗರಗಳಲ್ಲಿ ವ್ಯಾಪಕ ಬಂದೋಬಸ್ತ ಎರ್ಪಡಿಸಲಾಗಿದೆ. ಕೊಲೋಂಬೊದ ಗಾಲೆ ಕ್ರಿಕೆಟ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭವನ್ನು ಸರಕಾರ ಆಯೋಜಿಸಿದೆ.
|