ಹಿಮಾಲಯ ರಾಷ್ಟ್ರದಲ್ಲಿ ಕಳೆದ ಒಂದು ದಶಕದಿಂದ ನಡೆದ ಮಾನವ ಹಕ್ಕು ಉಲ್ಲಂಘನೆಯ ಸಮಸ್ಯೆಗೆ ಸರಕಾರ ಸ್ಪಂದಿಸಲು ವಿಫಲವಾದಲ್ಲಿ ಪ್ರಜಾಪ್ರಭುತ್ವಕ್ಕೆ ಮರಳುವ ನಿಟ್ಟಿನಲ್ಲಿ ನಡೆದಿರುವ ಐತಿಹಾಸಿಕ ಶಾಂತಿ ಪ್ರಕ್ರಿಯೆ ಮುರಿದು ಬಿಳುವ ಸಾಧ್ಯತೆ ಇದೆ ಸಂಯುಕ್ತ ರಾಷ್ಟ್ರದ ಅಧಿಕಾರಿಯೋರ್ವರು ಆತಂಕ ವ್ಯಕ್ತಪಡಿಸಿದ್ದಾರೆ.
ನಾಗರಿಕರ ವಿರುದ್ದ ನಡೆದ ದಬ್ಬಾಳಿಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಂಡುಬಂದಲ್ಲಿ ಜಾರಿಯಲ್ಲಿ ಇರುವ ಸಮಗ್ರ ಶಾಂತಿ ಮಾತುಕತೆಗೆ ದಕ್ಕೆ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಸಂಯುಕ್ತ ರಾಷ್ಟ್ರ ಸಂಘದ ಮಾನವ ಹಕ್ಕುಗಳ ಡೆಪ್ಯೂಟಿ ಹೈಕಮಿಷನರ್ ಕ್ಯೂಂಗ್ ವಾ ಕಾಂಗ್ ಹೇಳಿದ್ದಾರೆ.
ಕಠ್ಮಂಡುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ನೇಪಾಳದಲ್ಲಿ ಮಾನವ ಹಕ್ಕು ಉಲ್ಲಂಘನೆ ನಿರಂತರವಾಗಿ ಸಾಗಿದ್ದು. ಈ ಹಿಂದೆ ಮಾನವ ಹಕ್ಕು ಉಲ್ಲಂಘನೆ ಮಾಡಿರುವ ಒಬ್ಬೇ ಒಬ್ಬ ಅಪರಾಧಿಗೆ ಶಿಕ್ಷೆಯಾಗಿಲ್ಲ. ಮಾವೋವಾದಿಗಳು ಮತ್ತು ರಕ್ಷಣಾ ಪಡೆಯ ಸಿಬ್ಬಂದಿಗಳು ಒಟ್ಟಿಗೆ ಸೇರಿ ಕೊಲೆ, ಹಿಂಸೆ, ಅಪಹರಣ ಮತ್ತು ಅತ್ಯಾಚಾರಗಳಂತಹ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ.
ದಂಡನೆಯ ಭಯದಿಂದ ಮುಕ್ತರಾದ ಅಪರಾಧಿಗಳು ಪುನಃ ಹಿಂಸಾಕೃತ್ಯಗಳಿಗೆ ಮರಳುವ ಸಾಧ್ಯತೆ ಇದ್ದು, ಅಪರಾಧವೇಸಗಿದವರ ವಿರುದ್ಧ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಡ್ಯೆಪ್ಯುಟಿ ಹೈ ಕಮಿಷನರ್ ಈ ಸಂದರ್ಭದಲ್ಲಿ ಹೇಳಿದರು.
ನೇಪಾಳದ ತೇರಾಜಿ ಪ್ರದೇಶದಲ್ಲಿ ಮುಂದುವರಿದಿರುವ ಹಿಂಸಾಚಾರದ ಘಟನೆಗಳಿಗೆ ಕಳವಳ ವ್ಯಕ್ತಪಡಿಸಿದ ಅವರು, ಹಿಂಸಾಚಾರ ಶಾಂತಿ ಪ್ರಕ್ರಿಯೆಗೆ ಭಂಗ ತರಲಿದೆ. ಮಾನವ ಹಕ್ಕು ಕಾರ್ಯಕರ್ತರು ತಮ್ಮ ಕರ್ತವ್ಯವನ್ನು ನಿರ್ಭಿತಿಯಿಂದ ನಿರ್ವಹಿಸಬೇಕಿದ್ದಲ್ಲಿ ಅವರುಗಳ ರಕ್ಷಣೆಗೆ ಸರಕಾರ ಮುಂದಾಗಬೇಕು ಎಂದು ಶಾಂತಿ ಮಾತುಕತೆಯಲ್ಲಿ ಪಾಲ್ಗೊಂಡಿರುವ ಸಚಿವರುಗಳನ್ನು ಭಾರತದ ಗಡಿಯಲ್ಲಿರುವ ತೇರಾಯಿ ಪ್ರದೇಶದಲ್ಲಿ ಭೇಟಿಯಾದ ನಂತರ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
|