ಪಾಕಿಸ್ತಾನದ ಚುನಾವಣಾ ಆಯೋಗವು ಮುಂಬರುವ ನ್ಯಾಷನಲ್ ಅಸೆಂಬ್ಲಿಯ ಚುನಾವಣೆಗಳನ್ನು ಮುಕ್ತ ಮತ್ತು ನ್ಯಾಯಸಮ್ಮತ ಮಾರ್ಗದಲ್ಲಿ ನಡೆಸುವುದು ಅನುಮಾನ ಆದರೂ ಪಾಕಿಸ್ತಾನ ಮುಸ್ಲೀಂ ಲೀಗ್ (ನವಾಜ್ ಬಣ) ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಮಿಲಿಟರಿ ಆಡಳಿತಕ್ಕೆ ಅಂತ್ಯ ಹೇಳುವ ಪ್ರಯತ್ನ ಮಾಡಲಿದೆ ಎಂದು ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
ಫೆಬ್ರವರಿ 18ರಂದು ನಡೆಯಲಿರುವ ನ್ಯಾಷನಲ್ ಅಸೆಂಬ್ಲಿ ಚುನಾವಣೆಗಳನ್ನು ನಡೆಸದೇ ಇರುವುದು ಉತ್ತಮ. ಎಕೆಂದರೆ ಈಗ ಅಸ್ತಿತ್ವದಲ್ಲಿ ಇರುವ ಚುನಾವಣಾ ಆಯೋಗದ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ದುಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಅಭಿಪ್ರಾಯ ವ್ಯಕ್ತಪಡಿಸಿದರು.
ಪಾಕ್ ಚುನಾವಣೆ ಎನ್ನುವುದು ಒಂದು ಬೂಟಾಟಿಕೆ ಎಂದು ಹೇಳಿದ ಅವರು, ಮಿಲಿಟರಿ ಅಡಳಿತವನ್ನು ಅಂತ್ಯಗೊಳಿಸುವ ಉದ್ದೇಶದಿಂದ ಪಕ್ಷ ಚುನಾವಣೆಯಲ್ಲಿ ಪಾಲ್ಗೊಳ್ಳಲಿದೆ. ಅಧಿಕಾರಕ್ಕೆ ಮರಳಿದಲ್ಲಿ ಪದಚ್ಯುತ ನ್ಯಾಯಾಧೀಶರ ನೇಮಕ, ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ, ಮತ್ತು ಪೂರ್ಣ ಪ್ರಜಾಪ್ರಭುತ್ವವನ್ನು ದೇಶದಲ್ಲಿ ಜಾರಿ ಮಾಡಲಾಗುವುದು ಎಂದು ಎರಡು ಬಾರಿ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದ ಷರೀಫ್ ಭರವಸೆ ನೀಡಿದರು.
ಪರ್ವೇಜ್ ಮುಷರಫ್ ಅವರಿಗೆ ಚುನಾವಣೆ ನಡೆಸುವ ಇಚ್ಛೆ ಇಲ್ಲ. ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದು ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿಗಳಿಗೆ ಚುನಾವಣೆ ನಡೆಸುತ್ತಿದ್ದಾರೆ ಎಂದು ಅವರು ಆಪಾದಿಸಿ, ಪಾಕಿಸ್ತಾನ ಪೀಪಲ್ಸ್ ಪಕ್ಷದೊಂದಿಗೆ ಕೈ ಜೋಡಿಸಿ ದೇಶದಲ್ಲಿ ಪ್ರಜಾಪ್ರಭುತ್ವ ಪುನರ್ ಸ್ಥಾಪನೆಗೆ ಸಿದ್ಧ ಎಂದು ಹೇಳಿದ್ದಾರೆ.
|