ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಸತ್ತಿರುವುದು ಆತ್ಮಾಹುತಿ ಬಾಂಬರ್ ನಡೆಸಿರುವ ಬಾಂಬ್ ಸ್ಫೋಟದ ತೀವ್ರತೆಯಿಂದಲೇ ವಿನಹ, ಕೊಲೆಗಾರನ ಬುಲೆಟ್‌ನಿಂದ ಅಲ್ಲ ಎಂಬುದಾಗಿ ನ್ಯೂ ಯಾರ್ಕ್ ಟೈಮ್ಸ್ ತನ್ನ ಶುಕ್ರವಾರದ ಆವೃತ್ತಿಯಲ್ಲಿ ಸ್ಕಾಟ್‌ಲ್ಯಾಂಡ್ ಯಾರ್ಡ್ ತನಿಖಾಧಿಕಾರಿಗಳನ್ನು ಉಲ್ಲೇಖಿಸಿ ವರದಿಮಾಡಿದೆ.
ರಾವಲ್ಪಿಂಡಿಯಲ್ಲಿ ಡಿಸೆಂಬರ್ 27ರಂದು ಚುನಾವಣಾ ಪ್ರಚಾರ ಮಾಡಿ ಹೊರಡುತ್ತಿರುವ ವೇಳೆ ಭುಟ್ಟೋ ಹತ್ಯೆ ಮಾಡಲಾಗಿತ್ತು. ಈ ಜನಪ್ರಿಯ ನಾಯಕಿಯ ಸಾವು ಹಂತಕನ ಗುಂಡಿನಿಂದ ಸಂಭವಿಸಿದೆಯೆ ಅಥವಾ, ಆತ್ಮಾಹುತಿ ಬಾಂಬರ್‌ನ ಬಾಂಬ್ ದಾಳಿಯಿಂದ ಸಂಭವಿಸಿದೆಯೇ ಎಂಬ ಕುರಿತು ಪಾಕಿಸ್ತಾನದಲ್ಲಿ ವಿವಾದಗಳೆದ್ದಿದ್ದವು.
ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಶರಫ್ ಅವರು ಭುಟ್ಟೋ ಸಾವಿನ ತನಿಖೆಗಾಗಿ ಬ್ರಿಟನ್ನಿನ ಸ್ಕಾಟ್‌ಲ್ಯಾಂಡ್ ಯಾರ್ಡಿನ ಸಹಾಯ ಕೋರಿದ್ದರು. ಅಂತೆಯೇ ತನಿಖೆ ನಡೆಸಿರುವ ಸ್ಕಾಟ್‌ಲ್ಯಾಂಡ್ ಯಾರ್ಡಿನ ಪತ್ತೇದಾರಿ ತಂಡವು ಪಾಕಿಸ್ತಾನಕ್ಕೆ ಆಗಮಿಸಿದ್ದು ತನ್ನ ವರದಿಯನ್ನು ಪಾಕಿಸ್ತಾನ ಅಧಿಕಾರಿಗಳಿಗೆ ಸಲ್ಲಿಸಲಿದೆ.
|