ಅಮೆರಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿತನದ ಚುನಾವಣಾ ಪ್ರಚಾರದ ವೇಳೆ ತನ್ನ ಪತ್ನಿ ಹಿಲರಿ ಕ್ಲಿಂಟನ್ ಹಾಗೂ ಆಕೆಯ ವಿರೋಧಿ ಅಭ್ಯರ್ಥಿ ನಡುವೆ ನಡೆದ ಮಾತಿನ ಚಕಮಕಿಯಿಂದ ಪಾಠ ಕಲಿತಿರುವುದಾಗಿ ಹೇಳಿರುವ ಮಾಜಿ ಅಧ್ಯಕ್ಷ, ಬಿಲ್ ಕ್ಲಿಂಟನ್, ತಾನೆಂದಿಗೂ ಬಾರಕ್ ಒಬಾಮ ವಿರುದ್ಧ ವೈಯಕ್ತಿಕ ದಾಳಿ ನಡೆಸಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
"ಇತರ ಯಾವುದೇ ಪತಿಯು ತನ್ನ ಅಭ್ಯರ್ಥಿ ಪತ್ನಿಯನ್ನು ಸಮರ್ಥಿಸಿಕೊಳ್ಳುವಂತೆಯೆ ನಾನು ಹಿಲರಿಯನ್ನ ಸಮರ್ಥಿಸಿಕೊಂಡಿದ್ದೇನೆ ಎಂದೆನಿಸುತ್ತದೆ. ನಾನು ಹಿಲರಿಯನ್ನು ಉತ್ತೇಜಿಸಬೇಕು ಆದರೆ ತಾನು ಅಧ್ಯಕ್ಷನಾಗಿದ್ದೆ ಎಂಬ ಕಾರಣಕ್ಕೆ ಆಕೆಯನ್ನು ಸಮರ್ಥಿಸಿಕೊಳ್ಳಬಾರದು" ಎಂದು ಅವರು ಹೇಳಿದ್ದಾರೆ.
ಒಬಾಮ ಅವರ ಪ್ರಚಾರವನ್ನು ಈ ಹಿಂದಿನ ಕಪ್ಪು ಜನಾಂಗದ ಅಧ್ಯಕ್ಷೀಯ ಆಕಾಂಕ್ಷಿ ಜೆಸ್ಸಿ ಜಾಕ್ಸನ್ ಅವರ ವಿಫಲ ಪ್ರಚಾರಕ್ಕೆ ಕ್ಲಿಂಟನ್ ಹೋಲಿಸಿದ್ದು, ಡೆಮಾಕ್ರೆಟಿಕ್ ಸ್ಪರ್ಧಿಗಳ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿತ್ತು.
ಈ ಕುರಿತಂತೆ ಪ್ರಕಟವಾಗಿರುವ ಮಾಧ್ಯಮ ವರದಿಗಳಲ್ಲಿ ಹೆಚ್ಚನವು 'ವಾಸ್ತವವಾಗಿ ಸರಿಯಾಗಿಲ್ಲ' ಎಂದು ಕ್ಲಿಂಟನ್ ಶುಕ್ರವಾರ ಹೇಳಿಕೆ ನೀಡಿದ್ದರು. ಸೆನೆಟರ್ ಒಬಾಮರನ್ನು ದಕ್ಷಿಣ ಕೆರೊಲಿನಾದಲ್ಲಿ ತಾನ್ಯಾವತ್ತೂ ಟೀಕಿಸಿರಲಿಲ್ಲ ಎಂದು ಮಾಜಿ ಅಧ್ಯಕ್ಷರು ಹೇಳಿದ್ದಾರೆ.
ತಾನು ಹಿಲರಿಯನ್ನು ಉತ್ತೇಜಿಸುವ ಅವಶ್ಯಕತೆ ಇದೆ, ಆದರೆ ಸಮರ್ಥಿಸಿಕೊಳ್ಳಬಾರದು. ಈ ಎಲ್ಲದರಿಂದ ಒಂದು ಮೌಲ್ಯವುಳ್ಳ ಪಾಠ ಕಲಿತಿರುವೆ ಎಂದಿರುವ ಕ್ಲಿಂಟನ್, ಹಿಲರಿ ಪರ ಪ್ರಚಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದ್ದಾರೆ.
|