ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥನಕ್ಕೆ ಕಣ್ಣಿಟ್ಟಿರುವ ಬಾರಕ್ ಒಬಾಮಾ ಅವರು ತಮ್ಮ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ ವಿರುದ್ಧ ಮೇಲುಗೈ ಸಾಧಿಸುವುದನ್ನು ಮುಂದುವರಿಸಿದ್ದು, ನೆಬ್ರಾಸ್ಕಾ, ವಾಷಿಂಗ್ಟನ್ ಹಾಗೂ ಲೂಯಿಸಿಯಾನಾಗಳಲ್ಲಿ ನಡೆದ ಕಾಕಸ್ ಚುನಾವಣೆಗಳಲ್ಲಿ ವಿಜಯಿಯಾಗಿದ್ದಾರೆ.
ಅಮೆರಿಕದ ಮೊದಲ ಕರಿಯ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಆಕಾಂಕ್ಷೆ ಹೊಂದಿರುವ ಒಬಾಮಾ, ನೆಬ್ರಾಸ್ಕಾ ಮತ್ತು ವಾಷಿಂಗ್ಟನ್‌ಗಳಲ್ಲಿ ಹಿಲರಿ ಎದರು ದುಪ್ಪಟ್ಟು ಮತಗಳನ್ನು ಪಡೆದುಕೊಂಡಿದ್ದಾರೆ.
ಲೂಯಿಸಿಯಾನಾದಲ್ಲೂ ಸಮಾಧಾನಕರ ವಿಜಯ ಪಡೆದಿರುವ ಒಬಾಮಾ, ಅವರು ಶೇ.53 ಮತಗಳನ್ನು ಮಡೆದು ಶೇ.38 ಮತ ಪಡೆದಿರುವ ಹಿಲರಿಗಿಂತ ಮುಂದಿದ್ದಾರೆ.
ನೆಬ್ರಾಸ್ಕಾ ಮತ್ತು ವಾಷಿಂಗ್ಟನ್ ವಿಜಯದಿಂದಾಗಿ ಸೆನೆಟರ್ ಒಬಾಮಾ ಅವರು ನೇವಡಾ ಹೊರತುಪಡಿಸಿ ಹತ್ತು ಡೆಮಾಕ್ರಟಿಕ್ ಕಾಕಸ್ ಚುನಾವಣೆಗಳಲ್ಲಿ 9ರಲ್ಲಿ ವಿಜಯಿಯಾದಂತಾಗಿದೆ.
ಇದೀಗ ಮೇರಿಲ್ಯಾಂಡ್, ವರ್ಜೀನಿಯಾ ಮತ್ತು ವಾಷಿಂಗ್ಟನ್ ಡಿ.ಸಿ.ಗಳು ಮುಂದಿನ ಮಂಗಳವಾರ ಮತದಾನ ಮಾಡಲಿರುವ ಬಾಲ್ಟ್‌ವೇ ಪ್ರೈಮರಿ ಚುನಾವಣೆಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
|