ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಸಮಕಾಲೀನ ಭಾರತದ ಕುರಿತು ಹೊಸ ಎಂಎಸ್‌ಸಿ ಪದವಿಯೊಂದನ್ನು ಆರಂಭಿಸಿದೆ. ಭಾರತದ ಕುರಿತಂತೆ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಆಸಕ್ತಿ ಮತ್ತು ಭಾರತದ ಪ್ರಚಂಡ ಆರ್ಥಿಕ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಈ ಪದವಿಯನ್ನು ಆರಂಭಿಸಲಾಗಿದೆ.
ಈ ಪದವಿಯ ಪ್ರಥಮ ಬ್ಯಾಚು ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಆರಂಭಗೊಳ್ಳಲಿದೆ. ಭಾರತದ ಸಾಧನೆಗಳು ಮತ್ತು ನಿರಂತರ ಸಮಸ್ಯೆಗಳೆರಡನ್ನೂ ಕಲಿಯುವ ಅವಕಾಶವನ್ನು ಈ ಕೋರ್ಸ್ ವಿದ್ಯಾರ್ಥಿಗಳಿಗೆ ನೀಡಲಿದೆ. ಇದಲ್ಲದೆ, ಪ್ರಮುಖ ಸಾಮಾಜಿಕ ವಿಜ್ಞಾನ ವಿಚಾರಗಳಲ್ಲಿ ವಿಮರ್ಷಾತ್ಮಕ ವಿಶ್ಲೇಷಣಾ ಸಿದ್ಧಾಂತದ ಸಂಶೋಧನಾ ವಿಧಾನಗಳ ಕುರಿತ ಉನ್ನತ ಮಟ್ಟದ ತರಬೇತಿಯನ್ನೂ ನೀಡಲಾಗುವುದು.
ಪ್ರಮುಖವಾಗಿ ಸಾಮಾಜಿಕ ವಿಜ್ಞಾನಗಳು ಮತ್ತು ಇತಿಹಾಸ ಸೇರಿದಂತೆ ಎಲ್ಲಾ ಹಿನ್ನೆಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಪದವಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ವಿಶ್ವವಿದ್ಯಾನಿಲಯದ ಹೇಳಿಕೆ ತಿಳಿಸಿದೆ.
"ಭಾರತವು ಅಧ್ಯಯನಕ್ಕೆ ಮೋಡಿಮಾಡುವ ರಾಷ್ಟ್ರ: ಇದು ಜಗತ್ತಿನಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವಾಗಿದೆ. ಪ್ರಾಂತೀಯ ಮಹಾಶಕ್ತಿ ಮತ್ತು ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಮಹಾನ್ ಯಶಸ್ಸನ್ನು ಸಾಧಿಸಿದೆ" ಎಂಬುದಾಗಿ ಅಭಿವೃದ್ಧಿ ಅಧ್ಯಯನಗಳ ಪ್ರೊಫೆಸರ್ ಬಾರ್ಬರ ಹ್ಯಾರಿಸ್ ವೈಟ್ ಹೇಳಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವಾರು ಭಾರತೀಯರು ಈ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ನಡೆಸಿದ್ದಾರೆ.
|