ಅಮೆರಿಕ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿತನದ ಡೆಮಾಕ್ರೆಟಿಕ್ ನಾಮನಿರ್ದೇಶನದ ಆಕಾಂಕ್ಷಿ ಬಾರಕ್ ಒಬಾಮ, ಮಂಗಳವಾರ ಪ್ರಮುಖ ಮೂರು ಪ್ರಾಥಮಿಕ ಸ್ಫರ್ಧೆಗಳಲ್ಲಿ ತನ್ನ ಪ್ರತಿಸ್ಫರ್ಧಿ ಹಿಲರಿ ಕ್ಲಿಂಟನ್ ಅವರನ್ನು ಹಿಂದಿಕ್ಕಿದ್ದಾರೆ. ರಿಪಬ್ಲಿಕನ್ ಅಭ್ಯರ್ಥಿ ಜಾನ್ ಮೆಕ್‌ಕೆಯ್ನ್ ಅವರೂ ಕೂಡ ವರ್ಜೀನಿಯಾ, ಮೇರಿಲ್ಯಾಂಡ್ ಮತ್ತು ಕೊಲಂಬಿಯಾಗಳ ಪ್ರಾಥಮಿಕ ಚುನಾವಣೆಗಳನ್ನು ಗೆದ್ದು ಮುನ್ನಡಿ ಇಟ್ಟಿದ್ದಾರೆ.
ಈ ಮೂರು ನಿರ್ಣಾಯಕ ಗೆಲುವಿನ ಮೂಲಕ ಒಬಾಮ ಅವರು ಎಂಟು ನಿರಂತರ ಗೆಲುವುಗಳನ್ನು ಸಾಧಿಸಿದ್ದು ಗೆಲುವಿನ ಅಭಿಯಾನ ಮುಂದುವರಿಸಿದ್ದು, ಪಕ್ಷದ ನಾಮನಿರ್ದೇಶಿತ ವ್ಯಕ್ತಿಯನ್ನು ಆಯ್ಕೆ ಮಾಡುವ ಸಮ್ಮೇಳನ ಪ್ರತಿನಿಧಿಗಳ ಹಂತಕ್ಕೆ ತನ್ನ ಮುನ್ನಡೆಯನ್ನು ವಿಸ್ತರಿಸಿಕೊಂಡಿದ್ದಾರೆ.
ಮೆಕ್‌ಕೆಯ್ನ್ ಅವರು ತನ್ನ ಪ್ರತಿಸ್ಫರ್ಧಿ ಮೈಕ್ ಹ್ಯುಕಾಬೀ ಅವರನ್ನು ವರ್ಜೀನಿಯಾ, ಮೇರಿಲ್ಯಾಂಡ್ ಮತ್ತು ಕೊಲಂಬಿಯಾಗಳಲ್ಲಿ ಹಿಂದಿಕ್ಕಿದ್ದು ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗೆ ಪಕ್ಷದ ನಾಮನಿರ್ದೇಶನದ ಸನಿಹಕ್ಕೆ ತಲುಪಿದ್ದಾರೆ.
ಮಂಗಳವಾರದ ಒಬಾಮ ಗೆಲವು ಮೂರು ಫಲವತ್ತ ಪ್ರಾಂತ್ಯಗಳಲ್ಲಿ ಧಕ್ಕಿದೆ. ದೊಡ್ಡ ಸಂಖ್ಯೆಯ ಸುಶಿಕ್ಷಿತರ, ಉತ್ತಮ ಆದಾಯದ ಹಿನ್ನೆಲೆಯವರು ಮತ್ತು ನಿಗ್ರೋ ಮತದಾರರು ಒಬಾಮರನ್ನು ಅಭ್ಯರ್ಥಿತನದತ್ತ ಸಾಗಲು ಮತಚಲಾಯಿಸಿದ್ದಾರೆ.
|