ಪ್ರವಾದಿ ಮಹಮ್ಮದರ ವ್ಯಂಗ್ಯಚಿತ್ರ ರಚಿಸಿದ ಕಲಾವಿದನನ್ನು ಹತ್ಯೆಮಾಡಲು ಫಿತೂರಿ ನಡೆಸಿರುವ ಶಂಕೆಯಾಧಾರದಲ್ಲಿ ಮೂವರು ವ್ಯಕ್ತಿಗಳನ್ನು ಬಂಧಿಸಿರುವ ಮರುದಿನವಾದ ಬುಧವಾರದಂದು ಡೆನ್ಮಾರ್ಕಿನ ಪ್ರಮುಖ ಪತ್ರಿಕೆಗಳು ಪ್ರವಾದಿ ಮಹಮ್ಮದರ ವ್ಯಂಗ್ಯಚಿತ್ರಗಳನ್ನು ಮತ್ತೆ ಪ್ರಕಟಿಸಿವೆ.
ಡೆನ್ಮಾರ್ಕಿನ ಪ್ರಮುಖ ಪತ್ರಿಕೆ ಜಿಲ್ಲಾಂಡ್ಸ್ ಪೋಸ್ಟನ್, 2005ರ ಸೆಪ್ಟೆಂಬರ್ 30ರಂದು ಪ್ರವಾದಿ ಮಹಮ್ಮದರ 12 ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿತ್ತು. ಕರ್ಟ್ ವೆಸ್ಟರ್‌ಗಾರ್ಡ್ ಎಂಬವರು ರಚಿಸಿದ್ದ ಈ ವ್ಯಂಗ್ಯಚಿತ್ರ ಪ್ರಕಟಣೆಯನ್ನು ವಿರೋಧಿಸಿ ಮುಸ್ಲಿಂ ರಾಷ್ಟ್ರಗಳು ಉಗ್ರ ಪ್ರತಿಭಟನೆ ನಡೆಸಿದ್ದು ಡೆನ್ಮಾರ್ಕಿನ ರಾಯಭಾರಿ ಕಚೇರಿಗಳ ಮೇಲೆ ಬೆಂಕಿ ಹಚ್ಚಿದ್ದವು. ಅಲ್ಲದೆ ಡೆನ್ಮಾರ್ಕಿನ ಉತ್ಪಾದನೆಗಳಿಗೆ ನಿಷೇಧ ಹೇರಿದ್ದವು.
ಮಂಗಳವಾರ ಪಶ್ಚಿಮ ಡೆನ್ಮಾರ್ಕಿನಲ್ಲಿ ನಡೆದಿರುವ ಬಂಧನದ ಹಿನ್ನೆಲೆಯಲ್ಲಿ, ಈ ವ್ಯಂಗ್ಯಚಿತ್ರವನ್ನು ಪ್ರಕಟಿಸಿರುವ ಪತ್ರಿಕೆಗಳು ತಾವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬದ್ಧವಾಗಿರುವುದಾಗಿ ಹೇಳಿಕೊಂಡಿವೆ.
ಪ್ರವಾದಿಯವರ ಯಾವುದೇ ರೀತಿಯ ಚಿತ್ರಣವನ್ನು ಇಸ್ಲಾಮಿಕ್ ಕಾನೂನು ವಿರೋಧಿಸುತ್ತದೆ. ಅದು ಪರವಾಗಿರಲಿ ಅಥವಾ ವಿರೋಧವಾಗಿರಲಿ, ಮೂರ್ತಿಪೂಜೆ ಇಸ್ಲಾಮಿನಲ್ಲಿ ನಿಷಿದ್ಧವಾಗಿರುವ ಕಾರಣ ಈ ರೀತಿಯ ಚಿತ್ರಣ ಮೂರ್ತಿಪೂಜೆಗೆ ಹಾದಿಯಾಗಬಹುದು ಎಂಬ ಹಿನ್ನೆಲೆಯಲ್ಲಿ ಇಂತಹವುಗಳನ್ನು ನಿಷೇಧಿಸಲಾಗಿದೆ.
|