ಪಾಕಿಸ್ತಾನದ ಮೂರನೆ ಎರಡು ಭಾಗದ ಜನತೆ ಅಧ್ಯಕ್ಷ ಪರ್ವೇಜ್ ಮುಶರಫ್ ಆದಷ್ಟು ಬೇಗ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಭದ್ರತಾ ಪರಿಸ್ಥಿತಿ ಉತ್ತಮಗೊಳ್ಳಬಹುದು ಎಂದು ಜನಮತಗಣನೆಯೊಂದರಲ್ಲಿ ಅಭಿಪ್ರಾಯಿಸಿದ್ದಾರೆ.
ಜನವರಿಯ ಕೊನೆಯ ವೇಳೆಗೆ ಬಿಬಿಸಿಯು ನಡೆಸಿರುವ ಈ ಅಭಿಪ್ರಾಯ ಸಂಗ್ರಹದಲ್ಲಿ ಶೇ.63 ಪಾಕಿಸ್ತಾನಿಗರು ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ಇಫ್ತಿಕಾರ್ ಚೌಧುರಿಯವರನ್ನು ಪುನರ್‌ನೇಮಕ ಮಾಡಬೇಕು ಎಂದು ಹೇಳಿದ್ದಾರೆ.
ಚೌಧುರಿಯವರನ್ನು ಮುಶರಫ್ ವಜಾ ಮಾಡಿರುವುದನ್ನು ವಿರೋಧಿಸಿ ನಡೆಸಿದ್ದ ಪ್ರತಿಭಟನೆಗಳು ಅಣ್ವಸ್ತ್ರ ಹೊಂದಿರುವ ದಕ್ಷಿಣ ಏಷ್ಯಾದ ಈ ರಾಷ್ಟ್ರದಲ್ಲಿ ಸಾಕಷ್ಟು ರಾಜಕೀಯ ಉದ್ವಿಗ್ನತೆಯನ್ನು ಹುಟ್ಟುಹಾಕಿತ್ತು. ಮುಶರಫ್ ಅವರ ಈ ಕ್ರಮ ಅವರ ಪ್ರತಿಷ್ಠೆಯನ್ನು ದುರ್ಬಲಗೊಳಿಸಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಈ ಜನಮತಗಣನೆಯಲ್ಲಿ ಪಾಕಿಸ್ತಾನದಾದ್ಯಂತ 1,476 ಪ್ರಜೆಗಳನ್ನು ಅವರ ಮನೆಗಳಲ್ಲಿ ಸಂದರ್ಶಿಸಲಾಗಿತ್ತು. ಇದರಲ್ಲಿ ಶೇ.64 ಮಂದಿ ಮುಶರಫ್ ಈಗ ರಾಜೀನಾಮೆ ನೀಡಿದಲ್ಲಿ ಪಾಕಿಸ್ತಾನದಲ್ಲಿ ಸ್ಥಿರತೆ ಮತ್ತು ಭದ್ರತಾ ಸ್ಥಿತಿ ಉತ್ತಮಗೊಳ್ಳುತ್ತದೆ ಎಂದ ಹೇಳಿದ್ದಾರೆ. ಆದರೆ ಶೇ 25 ಮಂದಿ, ಮುಶರಫ್ ಈಗ ಸ್ಥಾನತ್ಯಜಿಸಿದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಅಭಿಪ್ರಾಯಿಸಿದ್ದಾರೆ.
ಮುಶರಫ್ ಅವರು ಕಳೆದ ನವೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಆಯ್ಕೆಯನ್ನು ಕೇವಲ ಶೇ29ಮಂದಿ ಸಿಂಧು ಎಂದಿದ್ದರೆ, ಶೇ 49 ಮಂದಿ ಅಸಿಂಧು ಎಂದಿದ್ದಾರೆ.
|