ಪಾಕಿಸ್ತಾನದಲ್ಲಿ ಮುಂದಿನ ಸೋಮವಾರ ನಡೆಯಲಿರುವ ಚುನಾವಣೆಯಲ್ಲಿ ಗೆದ್ದುಬಂದಲ್ಲಿ ಸಮ್ಮಿಶ್ರ ಸರಕಾರ ರೂಪಿಸುವಿಕೆ ಮತ್ತು ಚುನಾವಣಾ ಅಕ್ರಮಗಳು ಸಂಭವಿಸಿದರೆ, ಜಂಟಿ ಪ್ರತಿಭಟನೆ ನಡೆಸುವ ಕುರಿತಂತೆ ಮಾತುಕತೆ ನಡೆಸಲು ಮಾಜಿ ಪ್ರಧಾನಿ ನವಾಜ್ ಶರೀಫ್ ಹಾಗೂ ಪಿಪಿಪಿ ಪಕ್ಷದ ಸಹ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಶೀಘ್ರವೇ ಮಾತುಕತೆ ನಡೆಸಲಿದ್ದಾರೆ.
ಮಂಗಳವಾರ ಉಭಯ ನಾಯಕರು ನಡೆಸಿದ ಮಾತುಕತೆಯಲ್ಲಿ ಅವರ ಪಕ್ಷಗಳು ಅತಿ ದೊಡ್ಡ ಪಕ್ಷಗಳಾಗಿ ಹೊರಹೊಮ್ಮಿದಲ್ಲಿ ಸಮ್ಮಿಶ್ರ ಸರಕಾರ ನಡೆಸುವುದಾಗಿ ಹೇಳಿದ್ದರು.
ಸೋಮವಾರದ ಚುನಾವಣೆಯಲ್ಲಿ ಅಕ್ರಮಳು ನಡೆದರೆ ಜಂಟಿ ಪ್ರತಿಭಟನೆ ನಡೆಸುವ ಕುರಿತಾಗಿಯೂ ನಾಯಕರು ಮಾತುಕತೆ ನಡೆಸಲಿದ್ದಾರೆ ಎಂದು ಶರೀಫರ ಪಿಎಂಎಲ್-ಎನ್ ಪಕ್ಷದ ಮೂಲಗಳು ಹೇಳಿವೆ. ರಾಷ್ಟ್ರೀಯ ಹಾಗೂ ಪ್ರಾಂತೀಯ ಚುನಾವಣೆಗಳಲ್ಲಿ ಎರಡು ಪಕ್ಷಗಳು ಉತ್ತಮ ಪ್ರದರ್ಶನ ಮಾಡುವ ನಿರೀಕ್ಷೆ ಇರುವ ಕಾರಣ ಈ ಸಭೆಗೆ ಮಹತ್ವ ಕಲ್ಪಿಸಲಾಗಿದೆ.
ಗಾಲಪ್ ಪಾಕಿಸ್ತಾನ ಇತ್ತೀಚೆಗೆ ನಡೆಸಿದ ಸಮೀಕ್ಷೆಯು ದಿವಂಗತ ಬೆನಜೀರ್ ಭುಟ್ಟೋರ ಪಿಪಿಪಿಯು ಶೇ.35, ಪಿಎಂಎಲ್-ಎನ್ ಶೇ25 ಹಾಗೂ ಆಡಳಿತಾರೂಢ ಪಿಎಂಎಲ್-ಕ್ಯೂ ಶೇ.15 ಮತಗಳನ್ನು ಪಡೆಯಲಿದೆ ಎಂದು ಹೇಳಿದೆ. ಒಂದೊಮ್ಮೆ ಈ ಸಮೀಕ್ಷೆಗಳು ನಿಜವಾದಲ್ಲಿ ಪಿಪಿಪಿ ಮತ್ತು ಪಿಎಂಎಲ್-ಎನ್‌ಗಳು ಪಿಎಂಎಲ್-ಕ್ಯೂ ವಿರುದ್ಧ ನಿಚ್ಚಳ ಬಹುಮತ ಪಡೆಯಲಿದೆ.
|