ಅಮೆರಿಕಾಗೆ ಸಡ್ಡು ಹೊಡೆದು ಕ್ಯೂಬಾವನ್ನು ದೀರ್ಘಕಾಲ ಆಳಿದ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ತಮ್ಮ ಅಧ್ಯಕ್ಷ ಹಾಗೂ ಸೇನಾ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಂಗಳವಾರದ ಪತ್ರಿಕಾ ವರದಿಗಳು ಹೇಳಿವೆ.
ಮುಪ್ಪು ಹಾಗೂ ಖಾಯಿಲೆಯಿಂದ ಜರ್ಜರಿತರಾಗಿರುವ ಕ್ಯಾಸ್ಟ್ರೋ, ಕಳೆದ ವರ್ಷವೇ ಸಕ್ರಿಯ ರಾಜಕಾರಣದಿಂದ ನಿವೃತ್ತವಾಗುವ ಸುಳಿವು ನೀಡಿದ್ದರು. ಯಾವುದೇ ಸ್ಥಾನ ಮಾನಗಳನ್ನು ಹೊಂದದೆ, ಯುವಜನತೆಗೆ ಅಡ್ಡವಾಗದಿರುವುದು ತನ್ನ ಪ್ರಾಥಮಿಕ ಕರ್ತವ್ಯ ಎಂದು ಅವರು ಆ ವೇಳೆ ತಿಳಿಸಿದ್ದರು.
ವಿಶ್ವದಲ್ಲೇ ಅತೀ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಕಮ್ಯೂನಿಸ್ಟ್ ನಾಯಕ ಕ್ಯಾಸ್ಟ್ರೋ ಕಳೆದ ಐದು ದಶಕಗಳಿಂದ ರಾಷ್ಟ್ರವನ್ನು ಆಳುತ್ತಿದ್ದಾರೆ. 81ರ ಹರೆಯದ ಕ್ಯಾಸ್ಟ್ರೋ ಕಳೆದ ವರ್ಷ ಕರುಳಿನ ಖಾಯಿಲೆಯಿಂದ ಬಳಲಿದ್ದು ಶಸ್ತ್ರಕ್ರಿಯೆಗೊಳಗಾಗಿದ್ದ ವೇಳೆ, ತನ್ನ ಸಹೋದರ ರೌವುಲ್ ಕ್ಯಾಸ್ಟ್ರೋಗೆ ಔಪಚಾರಿಕ ಅಧಿಕಾರ ಹಸ್ತಾಂತರ ಮಾಡಿದ್ದರು.
1959ರಲ್ಲಿ ಆಗಿನ ಭ್ರಷ್ಟ ಅಧ್ಯಕ್ಷ ಫುಲ್ಗೆನ್ಸಿಯೊ ಬಾಟಿಸ್ಟ ಅವರ ವಿರುದ್ಧ ದಂಗೆ ಎದ್ದು ಅಧಿಕಾರ ಪಡೆದಿದ್ದರು. ತನ್ನ ರಾಷ್ಟ್ರದಲ್ಲಿ ಆರೋಗ್ಯ ಪಾಲನೆ ವ್ಯವಸ್ಥೆಯನ್ನ ಜಾರಿಗೆ ತಂದಿರುವ ಅವರು ಎಲ್ಲರಿಗೂ ಉಚಿತ ಆರೋಗ್ಯ ಪಾಲನೆ ಸೌಲಭ್ಯ ಒದಗಿಸಿದ್ದರು. ಇದಲ್ಲದೆ ಇವರ ಆಡಳಿತದ ಕ್ಯೂಬಾ ವಿಶ್ವದಲ್ಲಿಯೇ ಅತಿ ಹೆಚ್ಚು ಸಾಕ್ಷರರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ.
|