ಬಹರೈನ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಸ್ಥಳೀಯ ಕಾನೂನನ್ನು ಪಾಲಿಸಬೇಕು, ಕೊಲ್ಲಿ ರಾಷ್ಟ್ರದಲ್ಲಿ ಕಾನೂನು ಬಾಹಿರವಾಗಿರುವಂತಹ ಪ್ರತಿಭಟನೆಗಳಲ್ಲಿ ನಿರತವಾಗಬಾರದು ಎಂಬುದಾಗಿ ಮನಾಮದಲ್ಲಿ ಭಾರತೀಯ ರಾಯಭಾರಿ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.
ಭಾರತೀಯರು ಸೇರಿದಂತೆ ಅಸಂಖ್ಯ ಸಂಖ್ಯೆಯಲ್ಲಿ ಕಾರ್ಮಿಕರು ಹೆಚ್ಚಿನ ಬಹರೈನ್ ಕಂಪೆನಿಗಳಲ್ಲಿ ಮುಷ್ಕರ ಹೂಡಿರುವ ಸಂದರ್ಭದಲ್ಲಿ ಅವರ ಈ ಮನವಿ ಹೊರಬಿದ್ದಿದೆ. ಇವುಗಳಲ್ಲಿ ಹೆಚ್ಚಿನ ಕಂಪೆನಿಗಳು ಭಾರತೀಯ ರಾಯಭಾರ ಕಚೇರಿ ಮೇಲೆ ಗೂಬೆ ಕೂರಿಸಿವೆ.
ಭಾರತೀಯ ಕಾರ್ಮಿಕರು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿರುವುದರಲ್ಲಿ, ಇಲ್ಲವೇ ಸ್ಥಳೀಯ ಕಾರ್ಮಿಕ ಕಾನೂನುಗಳನ್ನು ಉಲಂಘಿಸುತ್ತಿರುವುದರಲ್ಲಿ ರಾಯಭಾರ ಕಚೇರಿಯ ಕೈವಾಡವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ಭಾರತೀಯರು ಸೇರಿದಂತೆ ವಿದೇಶಿ ಕಾರ್ಮಿಕರು ಬಹರೈನ್‌ನ ಕೆಲವು ಖಾಸಗೀ ಕಂಪೆನಿಗಳಲ್ಲಿ ಮುಷ್ಕರ ಹೂಡಿರುವ ವಿಚಾರಗಳು ಮಾಧ್ಯಮ ವರದಿಗಳ ಮೂಲಕ ತನ್ನ ಗಮನಕ್ಕೆ ಬಂದಿದ್ದು, ಭಾರತೀಯ ರಾಯಭಾರ ಕಚೇರಿಯು ತನ್ನ ದೇಶದ ಕಾರ್ಮಿಕರಿಗೆ ಯಾವತ್ತೂ ಸ್ಥಳೀಯ ಕಾನೂನು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿದೆ" ಎಂಬುದನ್ನು ರಾಯಭಾರ ಕಚೇರಿಯು ಸ್ಪಷ್ಟಪಡಿಸುತ್ತದೆ ಎಂದು ಶೆಟ್ಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
|