ಪಶ್ಚಿಮ ಇಂಡೋನೇಶ್ಯದಲ್ಲಿ ಸಂಭವಿಸಿರುವ ಪ್ರಬಲ ಭೂಕಂಪದ ಹಿನ್ನೆಲೆಯಲ್ಲಿ ಜಪಾನಿನ ಹವಾಮಾನ ಏಜೆನ್ಸಿಯು ಸುನಾಮಿ ಎಚ್ಚರಿಕೆ ನೀಡಿದೆ.
ಇಂಡೋನೇಶ್ಯದ ಸುಮಾತ್ರ ದ್ವೀಪದಲ್ಲಿ ಬುಧವಾರ ಅಪರಾಹ್ನ ರಿಕ್ಟರ್ ಮಾಪನದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ಪ್ರದೇಶದಲ್ಲಿ ಭೀತಿಹುಟ್ಟಿಸಿದೆ.
ಸ್ಥಳೀಯ ಕಾಲಮಾನ ಅಪಾಹ್ನ 3.08 ಗಂಟೆಗೆ ಉತ್ತರ ಸುಮಾತ್ರದ ರಾಜಧಾನಿಯ ನೈರುತ್ಯದಿಂದ ಸುಮಾರು 312 ಕೀ.ಮೀ ದೂರದಲ್ಲಿ ಸಾಗರ ಗರ್ಭದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಭೂಗರ್ಭ ಸಮೀಕ್ಷೆ ತಿಳಿಸಿದೆ. ಭೂಕಂಪದ ಬಳಿಕ 5.5 ತೀವ್ರತೆಯ ಪಶ್ಚಾತ್ ಕಂಪನ ಉಂಟಾಗಿದೆ. ಭೂಕಂಪದಿಂದಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಕ್ಷಣದ ವರದಿಗಳು ಹೇಳಿವೆ.
ಸುನಾಮಿ ಭೀತಿ ಇದ್ದರೂ ವಿಧ್ವಂಸಕಾರಿ ಸುನಾಮಿ ಸಂಭವಿಸುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದೊಮ್ಮೆ ಸುನಾಮಿ ಸಂಭವಿಸಿದಲ್ಲಿ ಅದು ಭೂಕಂಪ ಕೇಂದ್ರದ 100 ಕಿ.ಮೀ ವ್ಯಾಪ್ತಿಯಲ್ಲಿ ಮಾತ್ರ ಪರಿಣಾಮ ಬೀರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಮಾತ್ರದಲ್ಲಿ ಭೂಕಂಪ ಸಂಭವಿಸುತ್ತಲೇ ಸ್ಥಳೀಯರು ಭಯಗೊಂಡಿದ್ದು, ಹೆಚ್ಚಿನವರು ತಮ್ಮ ಮನೆ, ಕಟ್ಟಡಗಳಿಂದ ಹೊರಗೋಡಿದರು ಎಂದು ಸುದ್ದಿಸಂಸ್ಥೆಗಳು ಹೇಳಿವೆ.
|