ಯುನೈಟೆಡ್ ಅರಬ್ ಎಮಿರೇಟ್ಸ್‌ಗಳಲ್ಲಿ ಕೆಲಸಮಾಡುವ ಮನೆಗೆಲಸಗಾರರಿಗೆ ಭಾರತ ಸರಕಾರವು ಮಾಸಿಕ 1,100 ದಿರಮ್ ಕನಿಷ್ಠ ವೇತನ ನಿಗದಿಪಡಿಸಿದೆ.
ಇವರನ್ನು ನೇಮಿಸಿಕೊಳ್ಳುವವರು ಮಾಸಿಕ ಕನಿಷ್ಠ 10 ಸಾವಿರ ದಿರಮ್ ಸಂಪಾದಿಸುವ ಸಾಮರ್ಥ್ಯ ಉಳ್ಳವರಾಗಿರಬೇಕು ಎಂಬುದಾಗಿ ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೇಳಿದೆ. ಸರಕಾರವು ಈ ಹಿಂದೆ 600-650 ದಿರಮ್‌ಗಳ ವೇತನ ನಿಗದಿ ಪಡಿಸಿತ್ತು.
ಭಾರತದಿಂದ ಮನೆಗೆಲಸದವರನ್ನು ನೇಮಿಸಿಕೊಳ್ಳುವವರು 2,500 ಡಾಲರ್‌ಗಳ ಬ್ಯಾಂಕ್ ಗ್ಯಾರಂಟಿ ನೀಡಬೇಕು. ಈ ಮೊತ್ತವನ್ನು ಒಪ್ಪಂದದ ಅವಧಿ ಮುಗಿಯುವ ವೇಳೆಗೆ ಹಿಂತಿರುಗಿಸಲಾಗುವುದು ಎಂದು ಗಲ್ಫ್ ಟು ಡೇ ವರದಿ ಮಾಡಿದೆ.
ಭಾರತವು 30ರ ಹರೆಯದೊಳಗಿನ ಮಹಿಳೆಯರನ್ನು ಮನೆಗೆಲಸಕ್ಕೆ ನೇಮಿಸುವುದನ್ನು ನಿಷೇಧಿಸಿದೆ. ನೇಮಕಗೊಂಡಿರುವ ಎಲ್ಲಾ ಮಹಿಳೆಯರು ಚಾಲನೆಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡತಕ್ಕದ್ದು.
ಮನೆಯೊಡೆಯರು, ಮನೆಗೆಲಸಕ್ಕೆ ನೇಮಕವಾದ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ಮತ್ತು ಸಂಬಳವನ್ನೇ ಪಾವತಿಸುವುದಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಭಾರತ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ತನ್ನ ರಾಷ್ಟ್ರದ ಮನೆಗೆಲಸದಾಳ ನೇಮಕಾತಿ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಅನುಸರಿಸುವ ಮೊದಲ ರಾಷ್ಟ್ರ ಭಾರತವಾಗಿದೆ.
|