ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮತ್ತು ಪಿಎಂಎಲ್-ಎನ್ ಸಹಭಾಗಿತ್ವದಲ್ಲಿ ಪಾಕಿಸ್ತಾನದಲ್ಲಿ ಸಮ್ಮಿಶ್ರ ಸರಕಾರವನ್ನು ರಚಿಸಲು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಶರೀಫ್ ನಿರ್ಧರಿಸಿದ್ದಾರೆ.
ಈ ಮೊದಲು ಬೆನಜೀರ್ ಭುಟ್ಟೋ ಮತ್ತು ನವಾಜ್ ಶರೀಫ್ ನಡುವೆ ಒಪ್ಪಂದವಾಗಿದ್ದ ಪ್ರಜಾಪ್ರಭುತ್ವ ಹಕ್ಕನ್ನು ಜಾರಿಗೆ ತರಲು ,ಉಭಯ ಪಕ್ಷಗಳ ನಾಯಕರ ನಡುವಿನ ಪ್ರಥಮ ಸಭೆಯಲ್ಲಿ ಎರಡೂ ಪಕ್ಷಗಳು ಒಪ್ಪಿಗೆ ಸೂಚಿಸಿವೆ.
ಪಾಕಿಸ್ತಾನದಲ್ಲಿ ನಡೆದ ಚುನಾವಣೆಯಲ್ಲಿ ಪಿಪಿಪಿ ಮತ್ತು ಪಿಎಂಎಲ್-ಎನ್ ಪಕ್ಷಗಳು ಬಹುಮತದಲ್ಲಿ ಹೊರಬಿದ್ದ ನಂತರ, ಸಮ್ಮಿಶ್ರ ಸರಕಾರ ನಡೆಸುವ ನಿರ್ಧಾರದ ನಿರೀಕ್ಷೆಯಿತ್ತು. ಇದು ಎರಡೂ ಪಕ್ಷಗಳ ಮೊದಲ ಸಭೆಯಾಗಿದೆ.
ವಜಾ ಮಾಡಲಾಗಿದ್ದ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಪುನರ್ವಶ ಮಾಡುವಂತೆ ನವಾಜ್ ಶರೀಫ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದು, ಪಿಪಿಪಿ ಪಕ್ಷದ ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಈ ನಿರ್ಧಾರದಲ್ಲಿ ಎರಡೂ ಪಕ್ಷಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಸ್ಪಷ್ಟಪಡಿಸಿದರು.
"ಸಾಮಾನ್ಯ ಅಜೆಂಡಾಗೆ ನಾವು ಒಪ್ಪಿಗೆ ಸೂಚಿಸಿದ್ದೇವೆ. ಕೇಂಜ್ರ ಮತ್ತು ಪ್ರಾಂತ್ಯಗಳಲ್ಲಿ ಜೊತಯಾಗಿ ಸರಕಾರವನ್ನು ರಚಿಸಲು ಎರಡೂ ಪಕ್ಷಗಳು ಒಮ್ಮತದಿಂದ ಕಾರ್ಯ ನಿರ್ವಹಿಸಲಿವೆ" ಎಂದು ನವಾಜ್ ಶರೀಫ್ , ಪಿಪಿಪಿ ಪಕ್ಷದ ಅಧ್ಯಕ್ಷೆ ಬೆನಜೀರ್ ಭುಟ್ಟೋ ಅವರ ಪತಿ ಜರ್ದಾರಿ ಅವರೊಂದಿಗೆ ನಡೆಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
|