ಜೀವನವೇ ದುಸ್ತರ, ಹುಟ್ಟೂರಿಗೆ ಮರಳಿ ಜೀವನ ಸಾಗಿಸೋಣ ಎಂಬುದಾಗಿ ಆ ಕುಟುಂಬ ನಿರ್ಧರಿಸಿತ್ತು. ಯುಎಇಯಲ್ಲಿದ್ದ ಭಾರತೀಯ ಕುಟುಂಬವು ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಜೀವನ ವೆಚ್ಚ ಭರಿಸಲಾಗದೆ ತತ್ತರಿಸುತ್ತಿತ್ತು. ಸರಿ, ಭಾರತಕ್ಕೆ ಮರಳೋಣ ಎಂದು ನಿರ್ಧರಿಸಿಯೂ ಆಗಿತ್ತು. ಅಷ್ಟರಲ್ಲಿ ಒಲಿದಳು ಅದೃಷ್ಟ ಲಕ್ಷ್ಮಿ!
ಲಕ್ಷ್ಮಣ್ ಹಿಮ್‌ತಾನಿ ತನ್ನ ಕುಟುಂಬದೊಂದಿದೆ ದುಬೈಯಲ್ಲಿ ನೆಲೆಸಿದ್ದರು. ಅವರ ಪುತ್ರ 10ರ ಹರೆಯ ಮೋಹಿತ್ ಹಿಮ್‌ತಾನಿಗೆ ಐದು ದಶಲಕ್ಷ ದಿರಮ್ ಲಾಟರಿ ಹೊಡೆದಿದೆ. ಇದು ಯುಎಇ ಇತಿಹಾಸದಲ್ಲೇ ಅತಿ ದೊಡ್ಡ ಲಾಟರಿ ಮೊತ್ತವಾಗಿದೆ. ಲಕ್ಷ್ಮಣ್ ಅವರು ಖರೀದಿ ಮೇಳದಲ್ಲಿ 15 ಟಿಕೇಟುಗಳನ್ನು ಖರೀದಿಸಿದ್ದರು. ಮಗನ ಹೆಸರಲ್ಲಿ ಅದೃಷ್ಟ ಅವರಿಗೆ ಒಲಿದಿದ್ದು, ಕಷ್ಟವೆಲ್ಲ ಕರಗಿದೆ.
"ಇದೊಂದು ಅಚ್ಚರಿಯ ಆಘಾತ. ಮೋಹಿತ್‌ಗೆ ಬಹುಮಾನ ಗೆದ್ದಿರುವುದು ಗೊತ್ತಿದೆ. ಆದರೆ ಈ ಕುರಿತು ತಿಳಿದುಕೊಳ್ಳಲು ಆತ ತುಂಬ ಚಿಕ್ಕವನು. ನಾವು ಈ ಹಣವನ್ನು ಉಳಿತಾಯ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುತ್ತೇವೆ" ಎಂದು ಲಕ್ಷ್ಮಣ್ ಹೇಳಿದ್ದಾರೆ.
ಲಕ್ಷ್ಮಣ್ ಅವರು ಕಳೆದ ಎಂಟು ವರ್ಷದಿಂದ ಅದೃಷ್ಟದ ಬೆನ್ನತ್ತಿದ್ದಾರಂತೆ. ಅರ್ಥಾತ್, ಕಳೆದ ಎಂಟು ವರ್ಷಗಳಿಂದ ಅವರು ಲಾಟರಿ ಟಿಕೇಟನ್ನು ಖರೀದಿಸುತ್ತಲೇ ಬಂದಿದ್ದಾರೆ.
|