ಇತ್ತೀಚಿಗಿನ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಅಧ್ಯಕ್ಷ ಪರ್ವೇಜ್ ಮುಷರಫ್ ಬೆಂಬಲಿತ ಪಿಎಂಎಲ್-ಕ್ಯು ಪಕ್ಷದ ಅಗ್ರ ನಾಯಕರು ಇಂದು ಸಭೆ ನಡೆಸಿದರು.
ಪಕ್ಷದ ಕೆಲವು ನಾಯಕರು ಮಾಜಿ ಪ್ರಧಾನಿ ನವಾಜ್ ಶರೀಫ್‌ರ ಪಿಎಂಎಲ್-ಎನ್ ಪಕ್ಷದ ಜತೆ ಕೈಜೋಡಿಸಲು ಉತ್ಸುಕರಾಗಿದ್ದಾರೆ ಎಂಬ ಸುದ್ಧಿಗಳ ಮಧ್ಯೆಯೇ ಈ ಸಭೆ ನಡೆದಿದೆ.
ಪಕ್ಷದ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಚೌಧರಿ ಶುಜಾತ್ ಹುಸ್ಸೇನ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಹೊಸದಾಗಿ ಚುನಾಯಿತರಾದ ಎಂಪಿಗಳ ಸಂಸಧೀಯ ಪಕ್ಷದ ನಾಯಕನೊಬ್ಬನನ್ನು ಆರಿಸುವಂತೆ ಕರೆ ನೀಡಲಾಗಿದೆ ಎಂದು ಪಿಎಂಎಲ್-ಕ್ಯು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಮೂಲಗಳ ಪ್ರಕಾರ, ಪಕ್ಷದ ಶಾಸಕರು ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಪಿಎಂಎಲ್-ಎನ್ ಮತ್ತು ಪಿಪಿಪಿಗೆ ಪಕ್ಷಾಂತರ ಗೊಳ್ಳುವುದನ್ನು ತಡೆಯುವುದು ಈ ಸಭೆಯ ಪ್ರಮುಖ ಕಾರ್ಯಸೂಚಿಯಾಗಿತ್ತು.
ಪಿಎಂಎಲ್-ಕ್ಯುನ ಕೆಲವು ನಾಯಕರು ಪಿಎಂಎಲ್-ಎನ್ ಜತೆ ಕೈಜೊಡಿಸಲು ಒಲವು ತೋರುತ್ತಿದ್ದರೆ, ಇನ್ನು ಕೆಲವರು ಪಿಪಿಪಿ ಜತೆ ಮೈತ್ರಿ ಮಾಡಲು ಉತ್ಸುಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಿಎಂಎಲ್-ಕ್ಯುನ ಬಹುತೇಕ ನಾಯಕರು ಆಗಿನ ಪಿಎಂಎಲ್ ಪಕ್ಷದವರಾಗಿದ್ದರು. ಈ ನಾಯಕರು ಒಟ್ಟಾಗಿ ಪಿಎಂಎಲ್-ಕ್ಯು ಪಕ್ಷ ರಚಿಸಿದ್ದರು ಮತ್ತು 2002 ಸಾರ್ವತ್ರಿಕ ಚುನಾವಣೆಯಲ್ಲಿ ಮುಷರಫ್‌ಗೆ ಬೆಂಬಲ ನೀಡಿದ್ದರು.
ನವಾಜ್ ಶರೀಫ್, ಪಿಎಂಎಲ್-ಎನ್‌ನ ನೀತಿಗಳನ್ನು ಸ್ವೀಕರಿಸುವ ಪಿಎಂಎಲ್-ಕ್ಯು ನಾಯಕರನ್ನು ವಾಪಸು ಪಕ್ಷಕ್ಕೆ ಕರೆಸುವ ತಮ್ಮ ಇಚ್ಚೆ ವ್ಯಕ್ತಪಡಿಸಿದ್ದರು.
|