ಪಿಪಿಪಿಯ ಸಹ-ಅಧ್ಯಕ್ಷ, ಮಾಜಿ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟೋ ಅವರ ಪತಿ ಅಸಿಫ್ ಅಲಿ ಜರ್ದಾರಿ ವಿರುದ್ಧ ಹೊರಿಸಲಾಗಿದ್ದ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳನ್ನು ಪಾಕಿಸ್ತಾನದ ಮಧ್ಯಂತರ ಸರಕಾರ ಹಿಂತೆಗೆದುಕೊಂಡಿದೆ.
ಪಿಪಿಪಿ ಮತ್ತು ಪಿಎಂಎಲ್(ಎನ್) ಸರಕಾರ ರಚನೆಯ ಕುರಿತು ಮಾತುಕತೆ ನಡೆಸಲು ಸಭೆ ಸೇರುವ ಗಂಟೆಗಳ ಮುಂಚಿತವಾಗಿ ಸರಕಾರ ಈ ಕ್ರಮ ಕೈಗೊಂಡಿದೆ. ಬುಧವಾರದ ಈ ಬೆಳವಣಿಗೆಯು, ಚುನಾವಣಾ ನಂತರದ ರಾಜಕೀಯ ಸ್ಥಿತ್ಯಂತರದಲ್ಲಿ ಮುಶರಫ್ ಆಳ್ವಿಕೆಯು ಶಾಂತಿಯ ಸಂಕೇತವನ್ನು ಸೂಚಿಸಿದೆ.
ಜರ್ದಾರಿಯನ್ನು ದೋಷಮುಕ್ತ ಮಾಡಿದಲ್ಲಿ, ತುರ್ತುಪರಿಸ್ಥಿತಿಯಲ್ಲಿ ಪದಚ್ಯುತಗೊಂಡ ನ್ಯಾಯಾಧೀಶರ ಪುನಸ್ಥಾಪನೆಯಲ್ಲಿ ಪಿಎಂಎಲ್ (ಎನ್)ನ ನವಾಜ್ ಶರೀಫರೊಂದಿಗೆ ಅವರು ಕೈಜೋಡಿಸಲಾರರು ಮತ್ತು ಎಂಕ್ಯೂಎಂ ಮತ್ತು ಎಎನ್‌ಪಿ ಬೆಂಬಲದೊಂದಿಗೆ ಸರಕಾರ ರಚಿಸಲು ಮುಂದಾಗಬಹುದು ಎಂಬ ಹಿನ್ನೆಲೆಯಲ್ಲಿ ಈ ಪ್ರಮುಖ ನಿರ್ಧಾರಕ್ಕೆ ಬರಲಾಗಿದೆ. ಇದಲ್ಲದೆ, ಮುಶರಫ್‌ಗೆ ಛೀಮಾರಿ ಹಾಕುವ ಯಾವುದೇ ಕ್ರಮಗಳನ್ನು ಜರ್ದಾರಿ ವಿರೋಧಿಸುವ ಒಪ್ಪಂದ ಮಾಡಿಕೊಳ್ಳುವಲ್ಲಿ ಮುಶರಫ್ ಯಶಸ್ವಿಯಾಗಿದ್ದಾರೆನ್ನಲಾಗಿದೆ.
ಮುಶರಫ್ ಹಾಗೂ ಜರ್ದಾರಿಯವರ ನಡುವೆ ಅಮೆರಿಕದ ಪ್ರಯತ್ನದಿಂದ ಸಂಧಾನ ಮೂಡಿದ್ದು, ಈ ಇಬ್ಬರ ನಡುವೆ ಒಂದು ಕಾರ್ಯ ಒಪ್ಪಂದ ಏರ್ಪಟ್ಟಿದೆ ಎಂದು ವರದಿಗಳು ಹೇಳಿವೆ.
|