ರಾಜಕಾರಣಿಗಳ ವಿರುದ್ಧ ತಾರತಮ್ಯಕ್ಕೆ ಅವಕಾಶ ನೀಡುವ ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಶರಫ್ ಅವರ ಎಲ್ಲಾ ವಿವೇಚನಾ ಅಧಿಕಾರಗಳನ್ನು ಕತ್ತರಿಸಿ ಹಾಕಲು ಹೊಸ ಸಂಯುಕ್ತ ಸರಕಾರದ ಮಿತ್ರಪಕ್ಷಗಳು ನಿರ್ಧರಿಸಿವೆ.
ರಾಷ್ಟ್ರೀಯ ಉತ್ತರದಾಯಿ ಬ್ಯೂರೋ, ಹಾಗೂ ಇತರ ಹಲವಾರು ಸಾಂವಿಧಾನಿಕ ಅಧಿನಿಯಮಗಳು ಮತ್ತು ಕಾನೂನುಗಳಿಗೆ ತಿದ್ದುಪಡಿತರುವ ಯೋಜನೆಯು ಪಿಪಿಪಿ ಮತ್ತು ಪಿಎಂಎಲ್-ಎನ್ ತಜ್ಞರ ಪರಿಗಣನೆಯಲ್ಲಿದೆ ಎಂದು ಸ್ಥಳೀಯ ಪತ್ರಿಕೆ ದಿ ನ್ಯೂಸ್ ವರದಿ ಮಾಡಿದೆ. ಇದಲ್ಲದೆ, ಎರಡುಬಾರಿ ಅಧಿಕಾರ ಸ್ವೀಕರಿಸಿರುವ ಮಾಜಿ ಪ್ರಧಾನಿಗೆ ತೃತೀಯ ಬಾರಿಗೆ ಅಧಿಕಾರ ಹೊಂದಲು ಇರುವ ನಿಷೇಧವನ್ನು ಹಿಂತೆಗೆಯಲೂ ಸಹ ಈ ಯೋಜನೆಯಲ್ಲಿ ಪರಿಗಣಿಸಲಾಗಿದೆ.
ಹೊಸ ಸರಕಾರವು ಪ್ರಥಮವಾಗಿ, ಸುಪ್ರೀಂ ಕೋರ್ಟಿನ ಪದಚ್ಯುತ ನ್ಯಾಯಾಧೀಶರನ್ನು ಪುನಸ್ಥಾಪನೆ ಮಾಡಲು ಮುಂದಾಗಿದೆ.
ಸಂವಿಧಾನದ ಆರನೆ ಪರಿಚ್ಛೇದಕ್ಕೂ ಹೊಸ ಸರಕಾರ ತಿದ್ದುಪಡಿ ತರಲಿದೆ. ಈ ಮೂಲಕ ಅಧ್ಯಕ್ಷರ ಪೂರ್ವಾನುಮತಿ ಇಲ್ಲದೆ, ಸಂಸತ್ತಿನ ತಿದ್ದುಪಡಿ ಅಥವಾ ಸುಗ್ರೀವಾಜ್ಞೆಗಳ ಮೂಲಕ ಈ ಪರಿಚ್ಛೇದದ ಎಲ್ಲಾ 35 ಕಾನೂನುಗಳಿಗೆ ತಿದ್ದುಪಡಿ ಮಾಡುವ ಅಧಿಕಾರವನ್ನು ಮರುಸ್ಥಾಪಿಸಲಿದೆ. ಪ್ರಸ್ತುತ ಕಾನೂನು ಪ್ರಕಾರ ಅಧ್ಯಕ್ಷರಿಗೆ ಮಾತ್ರ ಈ ಹಕ್ಕಿದೆ.
|