ರಸ್ತೆ ಬದಿಯ ಬಾಂಬ್ ದಾಳಿಯಿಂದ ಹತರಾದ ಪೊಲೀಸ್ ಅಧಿಕಾರಿಯ ಅಂತ್ಯಕ್ರಿಯೆಯ ಪ್ರಾರ್ಥನೆ ವೇಳೆ ಆತ್ಮಾಹುತಿ ಬಾಂಬರ್ ನಡೆಸಿರುವ ದಾಳಿಯಲ್ಲಿ ಕನಿಷ್ಠ 38 ಮಂದಿ ಸಾವಿಗೀಡಾಗಿದ್ದು ಸುಮಾರು 50 ಮಂದಿ ಗಾಯಗೊಂಡಿರುವ ಘಟನೆ ವಾಯುವ್ಯ ಪಾಕಿಸ್ತಾನದಲ್ಲಿ ಶುಕ್ರವಾರ ಸಾಯಂಕಾಲ ಸಂಭವಿಸಿದೆ.
ಶುಕ್ರವಾರ ರಸ್ತೆಬದಿಯ ಬಾಂಬ್ ದಾಳಿಯಲ್ಲಿ ಡಿಎಸ್‌ಪಿ ಜಾವೇದ್ ಇಕ್ಬಾಲ್ ಮಸ್ತಿಕೇಲ್ ಇತರ ಮೂವರು ಗಾರ್ಡ್‌ಗಳೊಂದಿಗೆ ಹತರಾಗಿದ್ದರು. ಇವರ ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದು, ಈ ವೇಳೆಗೆ ಬಾಂಬ್ ಸ್ಫೋಟಿಸಲಾಗಿದೆ.
ಉಸ್ತುವಾರಿ ಆಂತರಿಕ ಸಚಿವ ಹಮೀದ್ ನವಾಜ್ ಖಾನ್ ಇದೊಂದು ಆತ್ಮಾಹುತಿ ದಾಳಿ ಎಂದು ಹೇಳಿದ್ದಾರೆ. ಮೃತ ಅಧಿಕಾರಿಗೆ ಪೊಲೀಸ್ ತುಕಡಿಯೊಂದು ಮಿಂಗೋರದ ಶಾಲೆಯ ಅಂಗಳದಲ್ಲಿ ಗೌರವರಕ್ಷೆ ನೀಡುತ್ತಿರುವಾಗ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಹತರಾಗಿರುವ ಹೆಚ್ಚಿನವರು ಪೊಲೀಸರು. ಸತ್ತವರಲ್ಲಿ ಮಿಂಗೋರ ಠಾಣಾಧಿಕಾರಿ ಹಬೀಬ್ ಝಮಾನ್, ಮೃತ ಪೊಲೀಸಧಿಕಾರಿ ಮಸ್ತಿಖೇಲ್ ಅವರ ಪುತ್ರ ಹಾಗೂ ಮಾಜಿ ಶಾಸಕರೊಬ್ಬರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
|