ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಭಾರತ ಮತ್ತು ಪಾಕಿಸ್ತಾನಗಳು ಕಾಶ್ಮೀರ ಸಮಸ್ಯೆಯ ಇತ್ಯರ್ಥವನ್ನು ಭವಿಷ್ಯದ ಜನಾಂಗಕ್ಕೆ ಬಿಟ್ಟು, ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಪಿಪಿಪಿಯ ಸಹ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಸೇನೆಯ ಅಧಿಕಾರದಲ್ಲಿದ್ದಾಗ, ಕಾಶ್ಮೀರ ವಿವಾದವನ್ನು ಪರಿಹರಿಸಬಹುದಿತ್ತು ಎಂಬ ಒಂದು ವರ್ಗದ ಅನಿಸಿಕೆಯನ್ನು ತಳ್ಳಿಹಾಕಿರುವ ಅವರು ಉಭಯ ರಾಷ್ಟ್ರಗಳಲ್ಲಿ 'ಭಯದ ಅಂಶ'ವನ್ನು ತೊಡೆದು ಹಾಕಲು ಜನತೆ-ಜನತೆಯ ನಡುವಿನ ಸಂಪರ್ಕ ಮತ್ತು ವ್ಯಾಪಾರದ ಮೇಲಿನ ಪರಸ್ಪರ ಅವಲಂಬನೆಯಿಂದ ಸಾಧ್ಯ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಹೊಸ ಪ್ರಧಾನಿಯನ್ನು ಭಾರತವು ಆಮಂತ್ರಿಸುವುದಾದರೆ, ಎರಡು ರಾಷ್ಟ್ರಗಳ ನಡುವೆ ಉತ್ತಮ ಸಂಬಂಧಗಳನ್ನು ಬಯಸುವ ಎಲ್ಲಾ ರಾಜಕೀಯ ಪಕ್ಷಗಳ ನಾಯಕರೊಂದಿಗೆ ತಾನೂ ದೆಹಲಿಗೆ ತೆರಳುವುದಾಗಿ ಅವರು ಕರಣ್ ಥಾಪರ್ ಅವರ ಡೆವಿಲ್ಸ್ ಅಡ್ವೋಕೇಟ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
ಎರಡೂ ಕಡೆಗಳ ಭಯದ ಅಂಶವು ನಶಿಸುವಂತಹ ವಿಶ್ವಾಸ- ವೃದ್ಧಿಯೆಡೆಗೆ ತಾನು ಉಭಯ ರಾಷ್ಟ್ರಗಳ ಸಂಬಂಧವನ್ನು ಒಯ್ಯಲು ಇಚ್ಛಿಸಿರುವುದಾಗಿ, ಪಾಕಿಸ್ತಾನದಲ್ಲಿ ಹೊಸ ಸರಕಾರ ರಚಿಸಲು ಸಿದ್ಧತೆ ಮಾಡುತ್ತಿರುವ ಪಿಪಿಪಿ ಸಹ ಅಧ್ಯಕ್ಷ ಹಾಗೂ ಭಯೋತ್ಪಾದಕರ ದಾಳಿಗೆ ತುತ್ತಾಗಿರುವ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಪತಿ ಜರ್ದಾರಿ ಹೇಳಿದ್ದಾರೆ.
|