90ರ ದಶಕದಲ್ಲಿ ರಾಜಕೀಯ ಸ್ಥಿತ್ಯಂತರಕ್ಕೆ ಒಳಗಾಗಿ ಪುನಃ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿರುವ ರಷಿಯಾ ಇಂದು ವ್ಲಾದಿಮೀರ್ ಪುಟಿನ್ ಅವರ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಯನ್ನು ಮಹಾ ಚುನಾವಣೆ ಮೂಲಕ ಪ್ರಾರಂಭಿಸಿದ್ದು. ವ್ಲಾದಿಮೀರ್ ಪುಟಿನ್ ಬೆಂಬಲ ಪಡೆದಿರುವ ಡಿಮಿಟ್ರಿ ಮೆದ್ವದೇವ್ ಅಧ್ಯಕ್ಷ ಪದವಿಗೆ ಎರುವ ಸಾಧ್ಯತೆ ಇದೆ.
ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ 42 ವರ್ಷದ ಸೆಂಟ್ ಪೀಟರ್ಸ್ ಬರ್ಗ್ ನ್ಯಾಯವಾದಿ ಡಿಮಿಟ್ರಿ ಮೆದ್ವದೇವ್ ಆಯ್ಕೆಯಾಗಲಿದ್ದಾರೆ ಎಂದು ಭವಿಷ್ಯ ನುಡಿಯಲಾಗಿದೆ. ರಷಿಯಾದ ಪೂರ್ವ ಭಾಗದಲ್ಲಿ ಇರುವ ಚೊಕುತಾದಲ್ಲಿ ಮೊದಲು ಮತದಾನ ಪ್ರಾರಂಭವಾಗಿದೆ. ರಷಿಯಾದ 11 ಸ್ಥಳೀಯ ಸಮಯ ನಿಗದಿ ಕೇಂದ್ರಗಳಲ್ಲಿ ಚೊಕುತಾ ಮೊದಲನೆ ಸ್ಥಾನದಲ್ಲಿದೆ. ಭಾರತೀಯ ಕಾಲಮಾನ ಅನುಸಾರ ಶನಿವಾರ ರಾತ್ರಿ 3 ಗಂಟೆಗೆ ಅಲ್ಲಿ ಮತದಾನ ಪ್ರಾರಂಭವಾಗಿದೆ.
ಯುರೋಪ್ ಖಂಡದಲ್ಲಿ ಬರುವ ಚುನಾವಣಾ ಕೇಂದ್ರಗಳಲ್ಲಿ ಮತದಾನ ಪೂರ್ಣಗೊಂಡ ನಂತರ ಚುನಾವಣಾ ಸಮೀಕ್ಷೆ ಮತ್ತು ಮೊದಲ ಹಂತದ ಫಲಿತಾಂಶ ಪ್ರಕಟವಾಗಲಿದೆ. ಅಂತಿಮ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಮೆದ್ವದೇವ್ ಶೇ 70-80 ರಷ್ಟು ಮತಗಳನ್ನು ಪಡೆದಿದ್ದು ಅವರ ಪ್ರತಿಸ್ಪರ್ಧಿ ಕಮ್ಯುನಿಸ್ಟ್ ನಾಯಕ ಗೆನೆಡಿ ಜ್ಯೂಗಾನೊವ್ ಶೇ 10-16ರಷ್ಟು ಮತ ಗಳಿಸಿದ್ದಾರೆ.
ರಷ್ಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ 70 ರಷ್ಟು ಮತದಾನ ಆಗಿದೆ ಎಂದು ವರದಿಯಾಗಿದೆ. ಮತ ಚಲಾಯಿಸುವಂತೆ ಪ್ಯಾಕ್ಟರಿಗಳ ಮಾಲೀಕರು ತಮ್ಮ ಉದ್ಯೋಗಿಗಳ ಮೇಲೆ ಒತ್ತಡ ತಂದಿದ್ದಾರೆ ಎಂದು ಟೀಕಾಕಾರರು ಟೀಕಿಸಿದ್ದಾರೆ.
ರಷಿಯಾದ ಸಂವಿಧಾನದ ಪ್ರಕಾರ ಅಭ್ಯರ್ಥಿಯೊಬ್ಬ ಎರಡು ಬಾರಿ ಅಧ್ಯಕ್ಷ ಪದವಿಯಲ್ಲಿ ಮುಂದುವರಿಯಬಹುದು. ವ್ಲಾದಿಮೀರ್ ಪುಟೀನ್ ಈಗಾಗಲೇ ಎರಡು ಬಾರಿ ಅದ್ಯಕ್ಷ ಪದವಿಯಲ್ಲಿ ಮುಂದುವರಿದಿದ್ದರಿಂದ ಅವರ ಅವಧಿ ಮುಕ್ತಾಯಗೊಂಡಿದ್ದು, ಮುಂಬರುವ ಮೇ ತಿಂಗಳಿನಲ್ಲಿ ಪುಟಿನ್ ಅಧಿಕಾರಾವಧಿ ಅಂತ್ಯಗೊಳ್ಳಲಿದೆ.
|