ದಕ್ಷಿಣ ಇಸ್ರೇಲ್ ಮೇಲೆ ಬಾಂಬ್ ದಾಳಿ ನಡೆಸುತ್ತಿದ್ದ ಹಮಾಸ್‍ನ ರಾಕೆಟ್ ದಾಳಿಗೆ ಪ್ರತ್ಯುತ್ತರವಾಗಿ ಇಸ್ರೇಲ್ ಸೇನೆ ಭಾರಿ ಪ್ರಮಾಣದಲ್ಲಿ ದಾಳಿ ನಡೆಸಿದ್ದು, 54 ಪ್ಯಾಲೆಸ್ತೀನಿಯ ನಾಗರಿಕರು ಸಾವಿಗೀಡಾಗಿದ್ದಾರೆ.
ಈ ಭೀಕರ ಘರ್ಷಣೆಯಲ್ಲಿ ಇಬ್ಬರು ಇಸ್ರೇಲ್ ಸೈನಿಕರು ಸತ್ತಿದ್ದರೆ, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸೇನೆ ತಿಳಿಸಿದೆ. ಸೌಮ್ಯವಾದಿ ಪ್ಯಾಲೆಸ್ತೀನ್ ನಾಯಕರು ಈ ಹತ್ಯೆಗಳನ್ನು ಜನಾಂಗೀಯ ಹತ್ಯೆ ಎಂದು ಕರೆದಿದ್ದು, ಶಾಂತಿ ಮಾತುಕತೆಯಿಂದ ಹೊರ ನಡೆಯುವ ಬೆದರಿಕೆ ಒಡ್ಡಿದ್ದಾರೆ.
ಈ ರಾಕೆಟ್ ದಾಳಿ ಉಗ್ರ ಮತ್ತು ಹೇಯವಾಗಿದೆ ಎಂದು ಹೇಳಿರುವ ಪ್ಯಾಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್, ಈಗಿನ ದಿನಗಳಲ್ಲಿ ಇದನ್ನು ಸಾಮೂಹಿಕ ಹತ್ಯಾಕಾಂಡ ಎಂದು ಕರೆಯುತ್ತಾರೆ ಎಂದು ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯರು ಶಾಂತಿ ಒಪ್ಪಂದಕ್ಕೆ ಬರುವಂತೆ ಮಾಡುವ ದಿಶೆಯಲ್ಲಿ ಅಮೆರಿಕ ವಿದೇಶಾಂಗ ಸಚಿವೆ ಕಾಂಡಲೀಸಾ ರೈಸ್‌ರ ಗಾಜಾ ಭೇಟಿಯ ಮುನ್ನ ಈ ಹಠಾತ್ ಹಿಂಸಾಚಾರ ಭುಗಿಲೆದ್ದಿದೆ. ಈ ವಲಯದಲ್ಲಿ ಹಿಂಸಾಚಾರ ತಾರಕಕ್ಕೇರುತ್ತಿರುವ ಹಿನ್ನೆಲೆಯಲ್ಲಿ ರೈಸ್ ಭೇಟಿ ಅನುಮಾನದಲ್ಲಿದೆ.
ವಾಷಿಂಗ್ಟನ್‌ನಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿ ವಕ್ತಾರ ಗೋರ್ಡನ್, ಎರಡೂ ಕಡೆಯಲ್ಲಾದ ನಾಗರಿಕ ಸಾವಿನ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದು, ಪ್ಯಾಲೆಸ್ತೀನಿಯರ ಮೇಲೆ ಹೆಚ್ಚಿನ ಆರೋಪ ಹೊರಿಸಿದರು.
|