ರಷ್ಯಾದ ನಿಯೋಜಿತ ಅಧ್ಯಕ್ಷ ಡಿಮಿಟ್ರಿ ಮೆದ್ವದಿವ್‌ಗೆ ಭಾರತದ ದೂರದ ಸಂಬಂಧವೊಂದಿದೆ. ಬಹುಶಃ ಹೆಚ್ಚಿನವರಿಗೆ ಇದು ಗೊತ್ತಿಲ್ಲ. ವ್ಲಾದಿಮಿರ್ ಪುತಿನ್ ಅವರ 42ರ ಹರೆಯದ ಉತ್ತರಾಧಿಕಾರಿಯ ಉಪನಾಮದ ಹಿಂದೆ ಬಿದ್ದರೆ, ಅದಕ್ಕೂ ಸಂಸ್ಕೃತ ಶಬ್ದಕ್ಕೂ ಸಮೀಪದ ಸಂಬಂಧ ಕಂಡುಬರುತ್ತದೆ.
ಮೆದ್ವದಿವ್ ಎಂಬ ಶಬ್ದದಲ್ಲಿರುವ ಮೆದ್ವೆದ್ ಎಂಬುದು ಕರಡಿ ಎಂಬುದಕ್ಕೆ ರಷ್ಯಾ ಭಾಷೆಯ ಪದ. ಕ್ರಿಶ್ಚಿಯನ್-ಪೂರ್ವ ರಷ್ಯನ್ನರು ಮರದ ಮೂರ್ತಿಗಳನ್ನು 'ಬಲವಾನ್' ಹೆಸರಿನಿಂದ ಪೂಜಿಸುತ್ತಿದ್ದರು. ಇಂಗ್ಲಿಷಿನಲ್ಲಿ ಬೇರ್ ಎನ್ನಲಾಗುತ್ತದೆ. ರಷ್ಯಾದಲ್ಲಿ ಬೆರ್ ಎಂಬ ಪದಕ್ಕೆ ನಿಷೇಧವಿದ್ದುದರಿಂದ ಅಲ್ಲಿ ಅವರು ಕರಡಿ ಬದಲಾಗಿ ಮದ್ವದ್ ಎಂದೇ ಕರೆಯತೊಡಗಿದರು.
ರಷ್ಯನ್ ಭಾಷೆಯಲ್ಲಿ ಮದ್ವೆದ್ ಎಂಬುದನ್ನು ಭಾಷಾಂತರಗೊಳಿಸಿದಾಗ, 'ಜೇನಿನ ಬಗ್ಗೆ ಜ್ಞಾನವಿರುವಾತ' ಎಂಬರ್ಥವೂ ಬರುತ್ತದೆ. ಅಂದರೆ ಕರಡಿಯು ಜೇನುಪ್ರಿಯ ಎಂಬುದು ನಮಗೆಲ್ಲಾ ತಿಳಿದ ವಿಷಯ. ಆರ್ಯರ ಭಾಷೆಯಾದ ಸಂಸ್ಕೃತದಲ್ಲಿಯೂ ಇದೇ ರೀತಿಯ ಪದಗುಚ್ಛವಿದೆ. ಅದುವೇ 'ಮಧು ವೇದಿ' ಅಂದರೆ ಮಧುವಿನ ಬಗ್ಗೆ ಅರಿವುಳ್ಳವನು ಎಂದರ್ಥ.
ಆರ್ಕಟಿಕ್ ರಷ್ಯಾವು ಇಂಡೋ-ಯೂರೋಪಿಯನ್ ಆರ್ಯನ್ ಬುಡಕಟ್ಟು ಜನಾಂಗೀಯರ ಮೂಲ ಸ್ಥಾನವಾಗಿತ್ತು ಎಂಬುದು ತಜ್ಞರ ಅಭಿಪ್ರಾಯ. ಕಾಲಾನಂತರದಲ್ಲಿ ಆರ್ಯನ್ನರು ದಕ್ಷಿಣದತ್ತ ವಲಸೆ ಬಂದಿದ್ದರು.
ವೇದ ವಿದ್ವಾಂಸರೂ ಆಗಿದ್ದ ಸ್ವಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ ತಿಲಕ್ ಅವರು ತಮ್ಮ 'ದಿ ಆರ್ಕಟಿಕ್ ಹೋಂ ಇನ್ ವೇದಾಸ್' ಎಂಬ ಕೃತಿಯಲ್ಲಿಯೂ ರಷ್ಯನ್ನರು ಮತ್ತು ಭಾರತೀಯರ ಮೂಲ ಒಂದೇ ಎಂಬುದನ್ನು ಪುಷ್ಟೀಕರಿಸುವ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ನಾಝಿ ಜರ್ಮನಿಯ ಬೆಳವಣಿಗೆ ಮತ್ತು ಯಹೂದಿಗಳ ವಿರುದ್ಧ ಹಿಟ್ಲರನ ಹಿಂಸಾಚಾರದ ನಂತರ, ಕಮ್ಯೂನಿಸ್ಟ್ ರಷ್ಯಾದಲ್ಲಿ ಆರ್ಯನ್ ಎಂದು ಪರಿಗಣಿಸಲಾಗುವ ಎಲ್ಲದಕ್ಕೂ ನಿಷೇಧವಿತ್ತು. 2007ರ ಜನವರಿ ತಿಂಗಳಲ್ಲಿ ಭಾರತಕ್ಕೆ ಆಗಮಿಸಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಕೂಡ ರಷ್ಯಾದ ಆರ್ಯನ್ ಬೇರುಗಳ ಕುರಿತು ಪ್ರಸ್ತಾಪಿಸಿದ್ದರು.
ನವದೆಹಲಿಯ ರಷ್ಯಾ ರಾಯಭಾರ ಕಚೇರಿಯಲ್ಲಿ ನಡೆದ ಖಾಸಗಿ ಕೂಟವೊಂದರಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪುತಿನ್, ಭಾರತೀಯರು ಮತ್ತು ರಷ್ಯನ್ನರ ಮೂಲ ಬೇರುಗಳಿಗೆ ಜೋರಾಸ್ಟರ್ ದಿನಗಳಷ್ಟು ಹಿಂದಿನ ಇತಿಹಾಸವಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆರ್ಥಡಾಕ್ಸ್ ಚರ್ಚ್ ಮತ್ತು ಯಹೂದಿಗಳ ಆಕ್ರೋಶಕ್ಕೆ ತುತ್ತಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅವರು ಆರ್ಯನ್ ಎಂಬ ಶಬ್ದ ಪ್ರಯೋಗಿಸುವ ಬದಲು ಜೊರಾಸ್ಟರ್ ಹೆಸರನ್ನಷ್ಟೇ ಹೇಳಿದ್ದರು.
|