ಇರಾನ್ ತನ್ನ ಯುರೇನಿಯಂ ಸಂವರ್ಧನೆ ಕಾರ್ಯವನ್ನು ತೊರೆಯುವಂತೆ ಒತ್ತಡ ಹೇರುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಹೊಸ ದಿಗ್ಬಂಧಗಳನ್ನು ಹೇರಿದೆ ಮತ್ತು ಇದೀಗಾಗಲೆ ಹೇರಿರುವ ದಿಗ್ಬಂಧನಗಳನ್ನು ಇನ್ನಷ್ಟು ಬಿಗಿಪಡಿಸಲಾಗಿದೆ. ಆದರೆ ಈ ನಿರ್ಬಂಧವನ್ನು ಕಾನೂನು ಬಾಹಿರ ಎಂದಿರುವ ಟೆಹ್ರಾನ್, ತನ್ನ ರಾಷ್ಟ್ರೀಯ ನೀತಿಯನ್ನು ಮುಂದುವರಿಸುವ ಗುರಿ ಹೊಂದಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಹದಿನೈದು ಸದಸ್ಯರಾಷ್ಟ್ರಗಳಲ್ಲಿ 14 ಸದಸ್ಯ ರಾಷ್ಟ್ರಗಳ ಸಮ್ಮತಿಯೊಂದಿಗೆ ಈ ಮಸೂದೆಯನ್ನು ಅಂಗೀಕರಿಸಲಾಗಿದೆ. ಇಂಡೊನೇಶ್ಯವು ಮಸೂದೆಯ ಪರವಾಗಿ ಮತ ಚಲಾಯಿಸಲು ನಿರಾಸಕ್ತಿ ತೋರಿದೆ. ಇರಾನ್ ಜತೆಗೆ ಯಾವುದೇ ನಾಗರಿಕ ಮತ್ತು ಸೇನಾ ಅಣುಕಾರ್ಯದಲ್ಲಿ ಬಳಸುವ ಯಾವುದೇ ಸಾಮಾಗ್ರಿಗಳ ವ್ಯಾಪಾರಕ್ಕೆ ದಿಗ್ಬಂಧನವು ನಿಷೇಧ ಹೇರಿದೆ.
ನಿರ್ಬಂಧಿತ ಸಾಮಾಗ್ರಿಗಳನ್ನು ವಿಮಾನ ಅಥವಾ ಹಡಗು ಮಾರ್ಗದ ಮೂಲಕ ಸಾಗಿಸಲಾಗುತ್ತಿದೆಯೆ ಎಂಬ ಪರೀಕ್ಷೆ ನಡೆಸುವ ಅಧಿಕಾರವನ್ನೂ ವಿಶ್ವಸಂಸ್ಥೆ ನೀಡಿದೆ.
ವಿಶ್ವಸಂಸ್ಥೆಯ ಈ ಕ್ರಮದಿಂದಾಗಿ ಇರಾನ್ ಮತ್ತು ಪಾಶ್ಚಾತ್ಯ ಶಕ್ತಿಗಳ ನಡುವೆ ತಿಕ್ಕಾಟ ಉಂಟಾಗಬಹುದು ಎಂಬುದಾಗಿ ಕೆಲವು ಮಧ್ಯಪ್ರಾಚ್ಯ ರಾಷ್ಟ್ರಗಳು ಭೀತಿ ವ್ಯಕ್ತಪಡಿಸಿವೆ. ಇರಾನ್ ಅಣ್ವಸ್ತ್ರಗಳನ್ನು ತಯಾರಿಸುತ್ತಿದೆ ಎಂದು ಪಾಶ್ಚಾತ್ಯ ರಾಷ್ಟ್ರಗಳು ಹೇಳತ್ತಲೇ ಬಂದಿವೆ. ಆದರೆ ತನ್ನ ಅಣುಕಾರ್ಯಕ್ರಮವೇನಿದ್ದರೂ ಸಂಪೂರ್ಣ ನಾಗರೀಕವಾದುದು ಎಂಬುದು ಇರಾನ್ ಪ್ರತಿಪಾದನೆ. ತಾನು ಅಣ್ವಸ್ತ್ರ ತಯಾರಿಯಲ್ಲಿ ತೊಡಗಿಲ್ಲ, ಇಂಧನ ಉತ್ಪಾದನೆ ತನ್ನ ಪ್ರಮುಖ ಗುರಿ ಎಂದು ಟೆಹ್ರಾನ್ ಹೇಳಿದೆ.
ದಿಗ್ಬಂಧನದ ಪರವಾಗಿ ಮತಚಲಾಯಿಸಿದ ಬಳಿಕ ಬ್ರಿಟಿಷ್ ರಾಯಭಾರಿ ಜಾನ್ ಸಾವರ್ಸ್, ಐದು ಖಾಯಂ ಸದಸ್ಯರ ಪರವಾಗಿ ಮಸೂದೆಯನ್ನು ಓದಿ ಹೇಳಿದರು. ಇರಾನ್ ತನ್ನ ಯುರೇನಿಯಂ ಸಂವರ್ಧನೆಯನ್ನು ನಿಲ್ಲಿಸಲು ಮನವೊಲಿಸಲು ಜರ್ಮನಿ ಮತ್ತೊಮ್ಮೆ ಉತ್ತೇಜಕಗಳ ಆಮಿಷ ಒಡ್ಡಿದೆ.
|