ಪ್ರಮುಖ ರಾಜ್ಯಗಳಾದ ಒಹಿಯೋ ಮತ್ತು ಟೆಕ್ಸಾಸ್ ರಾಜ್ಯಗಳಲ್ಲಿ ಗೆದ್ದು ಬಂದಿರುವ ಅಮೆರಿಕ ಅಧ್ಯಕ್ಷೀಯ ಪದವಿ ಆಕಾಂಕ್ಷಿ ಡೆಮಾಕ್ರಟ್ ಸದಸ್ಯೆ ಹಿಲರಿ ಕ್ಲಿಂಟನ್, ಸ್ಪರ್ಧೆಯಲ್ಲಿ ತಮ್ಮ ಸ್ಥಿತಿಯನ್ನು ಉತ್ತಮಪಡಿಸಿಕೊಂಡಿದ್ದರೆ, ವರ್ಮಂಟ್ ಪ್ರೈಮರಿಯಲ್ಲಿ ಬಾರಕ್ ಒಬಾಮಾ ಅವರು ಹಿಲರಿ ಕ್ಲಿಂಟನ್ ವಿರುದ್ಧ ಮೇಲುಗೈ ಸಾಧಿಸಿದ್ದಾರೆ.
ಅಧ್ಯಕ್ಷೀಯ ಅಭ್ಯರ್ಥಿ ಚುನಾವಣೆ ಸ್ಪರ್ಧೆಯಲ್ಲಿ ಒಬಾಮಾ ಸತತ 12ನೇ ವಿಜಯ ಸಾಧಿಸಿದ ಬಳಿಕ ಹಿಲರಿಯವರು ಬಹುತೇಕ ಸೋತಿದ್ದಾರೆ ಎಂದೇ ಯೋಚಿಸಲಾಗಿತ್ತು. ಆದರೆ, ಈ ಗೆಲುವು ಹಿಲರಿ ಆಕಾಂಕ್ಷೆಗೆ ನೀರೆರಚಿದೆ. ಓಹಿಯೋ ಅಥವಾ ಟೆಕ್ಸಾಸ್‌ಗಳಲ್ಲಿ ಸೋತಿದ್ದರೆ, ಹಿಲರಿ ಕನಸಿನ ಬಾಗಿಲು ಮುಚ್ಚಿದಂತಾಗುತ್ತಿತ್ತು ಎಂಬುದು ವಿಶ್ಲೇಷಕರ ಅಭಿಮತ. ರೋಡ್ ಐಲ್ಯಾಂಡ್‌ನಲ್ಲೂ ಹಿಲರಿ ಗೆಲುವು ಸಾಧಿಸಿದ್ದಾರೆ.
ಅಧ್ಯಕ್ಷೀಯ ಅಭ್ಯರ್ಥಿಗಾಗಿ ನಾಮಪತ್ರ ದೊರೆಯಬೇಕಿದ್ದರೆ 2025 ಡೆಲಿಗೇಟ್ ಮತಗಳ ಅವಶ್ಯಕತೆಯಿದ್ದು, ಒಬಾಮ ಬಳಿ 1385 ಹಾಗೂ ಹಿಲರಿ ಬಳಿ 1276 ಡೆಲಿಗೇಟ್ ಮತಗಳ ಬೆಂಬಲವಿದೆ. ಆಗಸ್ಟ್ ತಿಂಗಳಲ್ಲಿ ಡೇನ್ವರ್‌ನಲ್ಲಿ ನಡೆಯುವ ರಾಷ್ಟ್ರೀಯ ಸಮಾವೇಶದಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯನ್ನು ಆರಿಸಲಾಗುತ್ತದೆ.
ರಿಪಬ್ಲಿಕನ್ ಪಕ್ಷದಿಂದ ಜಾನ್ ಮೆಕ್‌ಕೈನ್ ಅವರು ಓಹಿಯೋ ಮತ್ತು ವರ್ಮಂಟ್‌ನಲ್ಲಿ ಗೆಲುವು ಸಾಧಿಸುವ ಮೂಲಕ, ಅಧ್ಯಕ್ಷೀಯ ಸ್ಪರ್ಧೆಗೆ ನಾಮಪತ್ರ ಪಡೆಯುವ ಸಮೀಪದಲ್ಲಿದ್ದಾರೆ.
|