ಅಮೆರಿಕದ ಅಧ್ಯಕ್ಷ ಸ್ಥಾನಾಕಾಂಕ್ಷಿ ಹಿಲರಿ ಕ್ಲಿಂಟನ್, ತಾನು ಆಯ್ಕೆಯಾದಲ್ಲಿ, ಅಮೆರಿಕದ ಮುಶರಫ್ ಕೇಂದ್ರೀಕೃತ 'ಏಕ ಆಯಾಮದ' ಪಾಕಿಸ್ತಾನ ನೀತಿಯನ್ನು ತೊಡೆದು ಹಾಕುವುದಾಗಿ ಮತ್ತು ಭಾರತ ಹಾಗು ಪಾಕಿಸ್ತಾನಗಳ ನಡುವೆ ಸುಧಾರಿತ ಸಂಬಂಧಗಳನ್ನು ವೃದ್ಧಿಸುವ ಭರವಸೆ ನೀಡಿದ್ದಾರೆ.
"ಕಳೆದ ಏಳು ವರ್ಷಗಳಲ್ಲಿ ಬುಶ್ ಆಡಳಿತವು ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ, ಏಕ ಆಯಾಮದ ನೀತಿಯನ್ನು ಹೊಂದಿದ್ದು, ಅಧ್ಯಕ್ಷ ಪರ್ವೇಜ್ ಮುಶರಫ್ ಕೇಂದ್ರಿಕೃತವಾಗಿದ್ದು, ಪಾಕಿಸ್ತಾನದ ಇತರ ರಾಜಕೀಯ ನಾಯಕರು ಮತ್ತು ನಾಗರೀಕ ಸಮಾಜವನ್ನು ಕಡೆಗಣಿಸುವ ನೀತಿ ಹೊಂದಿದೆ. ಇದನ್ನು ಬದಲಿಸುವ ಕಾಲ ಬಂದೊದಗಿದೆ" ಎಂದು ಹಿಲರಿ ಹೇಳಿದ್ದಾರೆ.
ಪಾಕಿಸ್ತಾನದ ಫೆ.18ರ ಚುನಾವಣೆಯು, ಅಮೆರಿಕದ ಪಾಕಿಸ್ತಾನ ನೀತಿಗೆ ಸಂಬಂಧಿಸಿದಂತೆ ಸ್ಪಷ್ಟ ಸಂಕೇತ ನೀಡಿದೆ. ತಾನು ಆಡಳಿತಕ್ಕೆ ಬಂದಲ್ಲಿ ಪಾಕಿಸ್ತಾನಕ್ಕೆ ನೀಡುವ ಸೇನಾ ಸಹಾಯವು ಉತ್ತರದಾಯಿಯಾಗಿರುತ್ತದೆ ಮತ್ತು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕೆ ವಿಶೇಷ ರಾಯಭಾರಿಯನ್ನು ನೇಮಿಸುವುದಾಗಿ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದೊಂದಿಗೆ ಸ್ಥಿರ ಸಂಬಂಧವನ್ನು ಉತ್ತೇಜಿಸುವುದಾಗಿ ಮತ್ತು ಅಪ್ಘಾನಿಸ್ತಾನದ ಸುದೀರ್ಘಕಾಲದ ಸ್ಥಿರತೆಗೆ ಇನ್ನಷ್ಟು ಕೊಡುಗೆ ನೀಡುವುದಾಗಿ ಹಿಲರಿ ಕ್ಲಿಂಟನ್ ತನ್ನ ಯೋಜನೆಗಳನ್ನು ಹೇಳಿದ್ದಾರೆ.
|