ರಾಷ್ಟ್ರದೊಳಗೆ ಯಾವುದೇ ಭಾರತ ವಿರೋಧಿ ಪ್ರಚಾರವನ್ನು ಸಹಿಸುವುದಿಲ್ಲ ಎಂದು ಹೇಳಿರುವ ಶ್ರೀಲಂಕ ಸರಕಾರ, ಬಿಕ್ಕಟ್ಟಿನ ಸಂದರ್ಭಗಳಲ್ಲಿ ನವದೆಹಲಿಯು ತಮಗೆ ಒತ್ತಾಸೆಯಾಗಿ ನಿಂತಿದೆ ಎಂದು ಹೇಳಿದೆ.
"ಭಾರತದ ಹಿತಾಸಕ್ತಿಗೆ ವಿರೋಧವಾಗಿರುವಂತಹ ಯಾವುದೇ ಕ್ರಿಯೆಯನ್ನು ನಾವು ಸಹಿಸೆವು. ಭಾರತವು ಅವಶ್ಯಕತೆ ಇದ್ದಾಗಲೆಲ್ಲ ನಮಗೆ ಸಹಾಯಹಸ್ತ ನೀಡಿದೆ. ಭಾರತವು ನಮ್ಮ ನಿಕಟ ಸ್ನೇಹಿತ ರಾಷ್ಟ್ರ" ಎಂದು ಶ್ರೀಲಂಕಾದ ಬಂದರು ಅಭಿವೃದ್ಧಿ ಸಚಿವ ದೀಲನ್ ಪೆರೆರಾ ಸಂಸತ್ತಿನಲ್ಲಿ ಹೇಳಿದ್ದಾರೆ.
ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿಯನ್ನು ವಿಸ್ತರಿಸುವ ಕುರಿತು ಸಂಸತ್ತಿನಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಅವರು ಮಾತನಾಡುತ್ತಿದ್ದರು. ಭಾರತದ ಸರಕುಗಳನ್ನು ಬಹಿಷ್ಕರಿಸಲು ಮಾರ್ಕ್ಸ್‌ವಾದಿ ಜೆವಿಪಿಯು ಹಮ್ಮಿಕೊಂಡಿರುವ ಚಳುವಳಿಗೆ ಶ್ರೀಲಂಕಾದ ಸರಕಾರ ಅನುಮತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತ ಹಾಗೂ ಶ್ರೀಲಂಕಾಗಳ ನಡುವಿನ ಬಾಂಧವ್ಯವು 'ಅತ್ಯುತ್ತಮವಾಗಿದೆ' ಎಂದು ನುಡಿದ ನಿರ್ಮಾಣ ಹಾಗೂ ಎಂಜಿನಿಯರಿಂಗ್ ಸೇವೆಗಳ ಸಚಿವ ರಾಜಿತೆ ಸೆನರಾತೆ, ಭಾರತವು ಎಂದಿಗೂ ಶ್ರೀಲಂಕಾದ ಹಿತಾಸಕ್ತಿಗೆ ವಿರೋಧವಾಗಿ ಕಾರ್ಯವೆಸಗಿಲ್ಲ ಎಂದು ಹೇಳಿದ್ದಾರೆ.
ಎಲ್‌ಟಿಟಿಇ ವಿರುದ್ಧದ ಯಶಸ್ವಿ ಚಳುವಳಿಯನ್ನು ತಡೆಯಲು ಭಾರತವು ಪ್ರಯತ್ನಿಸುತ್ತಿದೆ ಎಂದು ಈ ಹಿಂದೆ ಜೆವಿಪಿ ಸದಸ್ಯ ಕೆ.ಕೆ. ಲಾಲ್ಕಂತ ಹೇಳಿದ್ದರು.
|