ಪ್ರಜಾಪ್ರಭುತ್ವದತ್ತ ಪಾಕಿಸ್ತಾನ ಮರಳುತ್ತಿದೆ ಎನ್ನುತ್ತಿರುವಾಗಲೇ ಅಲ್ಲಿ ಅರಾಜಕತೆ ತಾಂಡವವಾಡುತ್ತಿದೆ ಎಂಬುದಕ್ಕೆ ಪುಷ್ಠಿ ನೀಡುವಂತೆ ಮಂಗಳವಾರ ಮತ್ತೆ ಸರಣಿ ಸ್ಫೋಟ ಸಂಭವಿಸಿ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದು, 170ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕೇಂದ್ರೀಯ ತನಿಖಾ ಕಚೇರಿ ಮೇಲೆ ಮೊದಲ ದಾಳಿ ನಡೆಸಿದ್ದರೆ, ಎರಡನೆ ದಾಳಿಯನ್ನು ಅಸಿಪ್ ಅಲಿ ಜರ್ದಾರಿ ಅವರ ಬಿಲವಾಲ್ ನಿವಾಸದ ಪಕ್ಕವೇ ನಡೆಸಲಾಗಿದೆ.
ಮುಂಜಾನೆ 9.30ಕ್ಕೆ ಮೊದಲ ದಾಳಿಯನ್ನು ತನಿಖಾ ಕೇಂದ್ರ ಮೇಲೆ ನಡೆಸಲಾಗಿದೆ. ಜನತೆ ತಮ್ಮ ಕಚೇರಿಗಳಿಗೆ ತೆರಳುವ ದಾವಂತದಲ್ಲಿರುವ ವೇಳೆಗೆ ಈ ದಾಳಿ ನಡೆದಿದೆ. ಈದಾಳಿಯಲ್ಲಿ ಕನಿಷ್ಠ 15 ಮಂದಿ ಸಾವಿಗೀಡಾಗಿದ್ದು ಇತರ ಹಲವರು ಗಾಯಗೊಂಡಿದ್ದಾರೆ. ರಾಷ್ಟ್ರದ ಪ್ರಧಾನ ತನಿಖಾ ಸಂಸ್ಥೆಯ ಏಳುಮಹಡಿಗಳ ಕಚೇರಿಯು ರೇಗಲ್ ಚೌಕ ಸಮೀಪದ ಟೆಂಪಲ್ ರಸ್ತೆಯ ವಾಣಿಜ್ಯ ಪ್ರದೇಶದಲ್ಲಿರುವ ಕಚೇರಿಮೇಲೆ ದಾಳಿ ನಡೆಸಲಾಗಿದೆ. ಆರಂಭದಲ್ಲಿ ಇದು ಆತ್ಮಾಹುತಿ ದಾಳಿ ಎಂದು ಪ್ರಾಥಮಿಕ ವರದಿಗಳು ಹೇಳಿದ್ದರೂ, ಕಟ್ಟಡದಲ್ಲಿ ಶಕ್ತಿಶಾಲಿ ಬಾಂಬ್ ಇರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಮಾರು 100 ಸಿಬ್ಬಂದಿಗಳಿರುವ ಈ ಕಚೇರಿಯ ಕಟ್ಟಡದೊಳಕ್ಕೆ ಇನ್ನೂ ಶೇ.70ರಷ್ಟು ಸಿಬ್ಬಂದಿಗಳು ಸಿಲುಕಿದ್ದಾರೆ ಎಂದು ವರದಿಗಳು ತಿಳಿಸಿವೆ. ಇನ್ನೊಂದು ಸ್ಪೋಟವು ಮಾಡೆಲ್ ಟೌನ್ ವಸತಿ ಪ್ರದೇಶದಲ್ಲಿ ಸಂಭವಿಸಿದೆ. ಇಬ್ಬರು ಆತ್ಮಾಹುತಿ ದಾಳಿಕೋರರು ಪಿಕ್-ಅಪ್ ಟ್ರಕ್‌ನಲ್ಲಿ ಮನೆಯೊಂದರ ಆವರಣಕ್ಕೆ ನುಗ್ಗಿ ಸ್ಫೋಟಿಸಿಕೊಂಡಿದ್ದಾರೆ. ಈ ಮನೆಯನ್ನು ಜಾಹೀರಾತು ಏಜೆನ್ಸಿಯೊಂದಕ್ಕೆ ಬಾಡಿಗೆಗೆ ನೀಡಲಾಗಿದೆ. ಇದೇ ಪ್ರದೇಶದಲ್ಲಿ ಪಿಪಿಪಿ ಸಹ-ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯವರ ಬಿಲವಾಲ್ ನಿವಾಸ ಹಾಗೂ ಲಾಹೋರ್ ನಗರದ ನಾಝಿಮ್ ಅಮಿರ್ ಮೆಹಮೂದ್ ಅವರ ನಿವಾಸಗಳೂ ಇವೆ.
ಈ ಸ್ಪೋಟದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಮನೆಯ ಆವರಣದೊಳಗೆ ತೆರಳಿದ ದುಷ್ಕರ್ಮಿಗಳನ್ನು ತಡೆಯುವ ಮುನ್ನವೇ ಅವರು ಸ್ಫೋಟಿಸಿಕೊಂಡರು. ಈ ಮನೆಯನ್ನು ಗುರಿಯಾಗಿಸಿ ನಡೆಸಲಾಗಿರುವ ಸ್ಫೋಟಕ್ಕೆ ಕಾರಣವೇನು ಎಂದು ತಿಳಿದಿಲ್ಲ ಎಂದು ಪೊಲೀಸ್ ಅಧಿಕಾರಿ ಅಜ್ಮನ್ ಗೊಂಡಾಲ್ ಹೇಳಿದ್ದಾರೆ.
|