ಸುದ್ದಿಯ ಮೂಲ ಬಹಿರಂಗ ಮಾಡಲು ಒಪ್ಪದ ವರದಿಗಾರ್ತಿಯೊಬ್ಬಳು ದಿನವೊಂದಕ್ಕೆ 5000 ಡಾಲರ್‌ವರೆಗೂ ದಂಡ ನೀಡುತ್ತಲೇ ಇರಬೇಕೆಂದು ಸ್ಥಳೀಯ ನ್ಯಾಯಾಲಯವೊಂದು ಆದೇಶಿಸಿದೆ!
2001ರ ಅಂಥ್ರಾಕ್ಸ್ ರೋಗದ ಕುರಿತು ಟೋನಿ ಲೂಸಿ ಎಂಬಾಕೆ ಯುಎಸ್ಎ ಟುಡೇಯಲ್ಲಿ ಬರೆದಿರುವ ಮತ್ತು ಮಾಜಿ ಸೇನಾ ವಿಜ್ಞಾನಿ ಸ್ಟೀವನ್ ಹಾಟ್‌ಫಿಲ್ ಅವರನ್ನೂ ಶಂಕಿತರಲ್ಲೊಬ್ಬರು ಎಂದು ಹೆಸರಿಸಿದ ಸುದ್ದಿಗಳ ಮೂಲಗಳನ್ನು ಬಹಿರಂಗಪಡಿಸುವವರೆಗೂ, ಮೊದಲ ವಾರದಲ್ಲಿ ದಿನಕ್ಕೆ 500 ಡಾಲರ್, ಎರಡನೇ ವಾರದಲ್ಲಿ ದಿನಕ್ಕೆ 1000 ಡಾಲರ್ ಹಾಗೂ ನಂತರದ ಪ್ರತಿ ದಿನಗಳಲ್ಲಿ ತಲಾ 5000 ಡಾಲರ್ ದಂಡ ನೀಡಬೇಕಾಗಿದೆಯಂತೆ.
ಈ ವರದಿಗಾರ್ತಿಯು ತನ್ನದೇ ಜೇಬಿನಿಂದ ಹಣ ನೀಡಬೇಕೇ ಹೊರತು, ಹಿಂದಿನ ಉದ್ಯೋಗದ ಮಾಲೀಕರು ಅಥವಾ ಬೇರಾರೂ ಆಕೆಗೆ ಸಹಾಯ ಮಾಡಬಾರದು ಎಂದೂ ನ್ಯಾಯಾಧೀಶರು ಆದೇಶಿಸಿದ್ದಾರೆ.
ಈ ದಂಡಶುಲ್ಕವು 'ಅಭೂತಪೂರ್ವ' ಎಂದು ಲೂಸಿ ಅವರ ವಕೀಲರಲ್ಲೊಬ್ಬರು ಉದ್ಗರಿಸಿದ್ದಾರೆ. ಸದ್ಯಕ್ಕೆ ಲೂಸಿ ಅವರು ವೆಸ್ಟ್ ವರ್ಜೀನಿಯಾ ಯುನಿವರ್ಸಿಟಿಯಲ್ಲಿ ಪತ್ರಿಕೋದ್ಯಮ ಬೋಧಿಸುತ್ತಿದ್ದಾರೆ ಮತ್ತು ವಾರ್ಷಿಕವಾಗಿ 75 ಸಾವಿರ ಡಾಲರ್ ಸಂಪಾದಿಸುತ್ತಿದ್ದಾರೆ. ಲೂಸಿ ಇದೀಗ ಸುದ್ದಿ ಮೂಲ ತಿಳಿಸಲು ಮೂರು ವಾರಗಳನ್ನು ತೆಗೆದುಕೊಂಡರೆ, ಆಕೆ 45,500 ಡಾಲರ್ ಅಥವಾ ತನ್ನ ವೇತನದ ಶೇ.60 ಭಾಗವನ್ನೂ ಕಳೆದುಕೊಳ್ಳಬೇಕಾಗುತ್ತದೆ.
ನಾನು ಈ ದಂಡ ಶುಲ್ಕ ಪಾವತಿಸಲಾರೆ ಎಂದಿದ್ದಾರೆ 48ರ ಹರೆಯದ ಲೂಸಿ. ಪಾವತಿಸಬೇಕಾದ ದಂಡದ ಮೊತ್ತ ಏರುತ್ತಲೇ ಹೋಗುತ್ತದೆ, ಅಷ್ಟೆ. ಕೊಡಲು ನನ್ನಲ್ಲಿ ಅಷ್ಟು ಹಣವೂ ಇಲ್ಲ ಎಂದಾಕೆ ಹೇಳಿದ್ದಾರೆ.
ದಂಡ ಪಾವತಿಸದಿದ್ದರೆ ಆಕೆಗೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ. ಈ ತೀರ್ಪು ಪ್ರಶ್ನಿಸಿ ಉಚ್ಚ ನ್ಯಾಯಾಲಯಕ್ಕೆ ಹೋಗುವುದಾಗಿ ಆಕೆಯ ವಕೀಲರು ಹೇಳಿದ್ದಾರೆ.
ಅಂಥ್ರಾಕ್ಸ್ ದಾಳಿಗಳಿಗೆ ತನ್ನನ್ನೂ ಶಂಕಿತನನ್ನಾಗಿ ವರದಿ ಪ್ರಕಟಿಸಿರುವುದರಿಂದ ಕುಪಿತಗೊಂಡ ಹಾಟ್‌ಫಿಲ್, ಸರಕಾರಿ ಮೂಲಗಳನ್ನು ಬಹಿರಂಗಪಡಿಸುವಂತೆ ಲೂಸಿ ಸಹಿತ ಆರು ಮಂದಿ ವರದಿಗಾರರ ವಿರುದ್ಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಈ ಆಂಥ್ರಾಕ್ಸ್ ದಾಳಿ ಪ್ರಕರಣದಲ್ಲಿ, ಪೂರ್ವ ತೀರದ ಹಲವು ಮನೆಗಳಿಗೆ ವಿಷಯುಕ್ತ ಅಂಚೆಯನ್ನು ಕಳುಹಿಸಲಾಗಿತ್ತು ಮತ್ತು ಇದರಿಂದ ಐವರು ಸಾವನ್ನಪ್ಪಿದ್ದರು.
|