ಉತ್ತರ ಕೊರಿಯಾ ಅಣ್ವಸ್ತ್ರ ಕಾರ್ಯಕ್ರಮಗಳನ್ನು ರದ್ದುಗೊಳಿಸುವ ಕುರಿತಂತೆ ಅಮೆರಿಕದ ಉನ್ನತ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ.
ಉತ್ತರ ಕೊರಿಯಾದ ಕಿಮ್ ಕೆ ಗ್ವಾನ್ ಅವರೊಂದಿಗೆ ಅಮೆರಿಕದ ಸಂಧಾನಕಾರರಾದ ಕ್ರಿಸ್ಟೋಫರ್ ಹಿಲ್ ಮಾತುಕತೆ ನಡೆಸಿದ್ದು ಫಲಿತಾಂಶ ಉತ್ತಮವಾಗಿ ಬರಲಿದೆ ಎಂದು ಹೇಳಿದ್ದಾರೆ.
ಯೊಂಗಬಾನ್‌ನಲ್ಲಿರುವ ಪ್ಲೂಟೊನಿಯಂ ಘಟಕ ಹಾಗೂ ಪೊಂಗ್‌ಯಾಂಗ್‌ನಲ್ಲಿರುವ ಅಣ್ವಸ್ತ್ರ ಘಟಕಗಳನ್ನು ನಾಶಪಡಿಸಿ ವರದಿಯನ್ನು ಸಲ್ಲಿಸುತ್ತೇವೆ ಎಂದು ಉತ್ತರ ಕೊರಿಯಾ ಅಮೆರಿಕಕ್ಕೆ ಒಪ್ಪಂದದಲ್ಲಿ ತಿಳಿಸಿದ್ದರೂ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಅಮೆರಿಕದ ಸಂಧಾನಕಾರ ಕ್ರಿಸ್ಟೋಫರ್ ಹಿಲ್ ಹೇಳಿದ್ದಾರೆ.
ಮುಂದಿನ ಹಂತದಲ್ಲಿ ಪರಿಪೂರ್ಣವಾದ ಘೋಷಣಾ ಪತ್ರವನ್ನು ಉತ್ತರ ಕೊರಿಯಾ ಅಮೆರಿಕ ದೇಶಕ್ಕೆ ಸಲ್ಲಿಸಲಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ನಡೆದ ಮಾತುಕತೆಯಲ್ಲಿ ಉತ್ತರ ಕೊರಿಯಾ, ದಕ್ಷಿಣ ಕೊರಿಯಾ, ಚೀನಾ ರಷ್ಯಾ, ಜಪಾನ್ ಮತ್ತು ಅಮೆರಿಕ ದೇಶಗಳ ಸಮ್ಮುಖದಲ್ಲಿ ಅಣ್ವಸ್ತ್ರ ಘಟಕಗಳನ್ನು ಮುಚ್ಚುವುದಾಗಿ ಘೋಷಿಸಿತ್ತು.
|