ಭಾರತೀಯ ಆಹಾರ ಉದ್ಯಮಕ್ಕೆ ಮಾರಕವಾಗಬಲ್ಲಂತಹ, ವಲಸೆ ನಿಯಮಗಳನ್ನು ವಿರೋಧಿಸಿ, ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯ ರೆಸ್ಟೋರೆಂಟ್ ಮಾಲಿಕರು, ಎಡಿನ್‌ಬರ್ಗ್‌ನಲ್ಲಿರುವ ಸ್ಕಾಟಿಷ್ ಪಾರ್ಲಿಮೆಂಟ್ ಮುಂದೆ ಪ್ರತಿಭಟನೆ ನಡೆಸಿದರು.
ಈ ಹೊಸನಿಯಮಗಳ ಪ್ರಕಾರ, ಭಾರತೀಯ ಮೂಲದ ಯಾವುದೇ ಬಾಣಸಿಗರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಂತಿಲ್ಲ. ಇದು ಇಲ್ಲಿರುವ ಸಾವಿರಾರು ಭಾರತೀಯ ರೆಸ್ಟೋರೆಂಟ್ ಮಾಲೀಕರನ್ನು ಭೀತಿಗೆ ದೂಡಿದೆ. ಬಹಳಷ್ಟು ರೆಸ್ಟೋರೆಂಟ್‌ಗಳು ಬಾಣಸಿಗರ ಅಭಾವದಿಂದ ಬಾಗಿಲು ಹಾಕಿವೆ.
ಪ್ರತಿಭಟನೆಕಾರರು, ಇಲ್ಲಿನ ಪ್ರಥಮ ಪ್ರಜೆ, ಅಲೆಕ್ಸ್ ಸ್ಯಾಲ್ಮಂಡ್‌ರನ್ನು ಭೇಟಿ ಮಾಡಿ ತಮಗಾಗಿರುವ ಅನಾನುಕೂಲಗಳನ್ನು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾಲ್ಮಂಡ್, "ಇದು ತೀವ್ರ ಸ್ವರೂಪದ ಸಮಸ್ಯೆ ಆಗಿದೆ" ಎಂದು ತಿಳಿಸಿದರು.
ತಾವು ಈ ಕುರಿತು ಸರಕಾರದ ಗಮನ ಸೆಳೆಯುವುದಾಗಿ ಭಾರತೀಯ ರೆಸ್ಟೋರೆಂಟ್ ಮಾಲಿಕರಿಗೆ ಸಾಲ್ಮಂಡ್ ಭರವಸೆ ನೀಡಿದರು. "ಪರಿಣಿತಿ ಹೊಂದಿದ ಸಿಬ್ಬಂದಿಯ ಕೊರತೆ ಉಂಟಾದರೆ, ರೆಸ್ಟೋರೆಂಟ್ ನಡೆಸುವುದು ನಿಜಕ್ಕೂ ಕಷ್ಟವೇ. ರೆಸ್ಟೋರೆಂಟ್‌ಗಳು ಮುಚ್ಚಿದರೆ,ಅದು ಸ್ಕಾಟ್ಲೆಂಡ್‌ನ ಅರ್ಥ ವ್ಯವಸ್ಥೆಯ ಮೇಲೆ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ತೀವ್ರ ರೀತಿಯ ಪರಿಣಾಮ ಉಂಟು ಮಾಡುತ್ತದೆ. ಹೊಸ ಪದ್ಧತಿಯು ವಿದೇಶಿ ವಲಸಿಗರ ಕುರಿತಂತೆ ಯಾವುದೇ ತಾರತಮ್ಯ ಅನುಸರಿಸುತ್ತಿಲ್ಲ ಎಂದುಕೊಂಡಿದ್ದೇನೆ. ಲಂಡನ್ ಸರ್ಕಾರದಿಂದ ಹೀಗಾದದ್ದಕ್ಕೆ ನಾನು ವಿಷಾದಿಸುತ್ತೇನೆ. ಭಾರತೀಯ ರೆಸ್ಟೋರೆಂಟ್‌ಗಳು ಬಾಗಿಲು ಹಾಕಿದರೆ, ಇಲ್ಲಿ ಸಾಕಷ್ಟು ತೊಂದರೆ ಉಂಟಾಗುತ್ತದೆ. ಸ್ಕಾಟ್ಲೆಂಡ್ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗುತ್ತದೆ. ನಿಯಮಗಳನ್ನು ಕುರಿತಂತೆ ಸರ್ಕಾರದ ಗಮನ ಸೆಳೆಯುತ್ತೇನೆ" ಎಂದು ಅವರು ತಿಳಿಸಿದರು.
|