ನೂತನವಾಗಿ ಚುನಾಯಿತಗೊಂಡ ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯ ಸದಸ್ಯರು ಇಂದು ನ್ಯಾಷನಲ್ ಅಸೆಂಬ್ಲಿಯ ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್‌ರನ್ನು ಆಯ್ಕೆ ಮಾಡಲಿದ್ದಾರೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಪರವಾಗಿ ಸ್ಪೀಕರ್ ಸ್ಥಾನಕ್ಕೆ ಸ್ಪರ್ಧಿಸಿರುವ ಫಾಹಿಮದಾ ಮಿರ್ಜಾ ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆಗಳಿದ್ದು, ಈ ಮೂಲಕ ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಗೆ ಪ್ರಥಮ ಮಹಿಳಾ ಸ್ಪೀಕರ್ ನೇಮಕವಾಗಲಿದ್ದಾರೆ.
ಸ್ಪೀಕರ್ ಮತ್ತು ಡ್ಯೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ಒಟ್ಟು ನಾಲ್ವರು ಸಂಸದರು ಸ್ಪರ್ಧಿಸಿದ್ದಾರೆ. ಆಡಳಿತ ಮತ್ತು ವಿರೋಧ ಪಕ್ಷಗಳು ತಲಾ ಎರಡು ನಾಮಪತ್ರಗಳನ್ನು ನ್ಯಾಷನಲ್ ಅಸೆಂಬ್ಲಿಯ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದು, ನಾಲ್ಕು ನಾಮಪತ್ರಗಳನ್ನು ಕಾರ್ಯದರ್ಶಿ ಸ್ವೀಕರಿಸಿದ್ದಾರೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿಯು ಫಾಹಿಮದಾ ಮಿರ್ಜಾ ಮತ್ತು ಫೈಸಲ್ ಕರಿಮ್ ಕುಂಡಿ ಅವರ ನಾಮಪತ್ರಗಳನ್ನು ಕ್ರಮವಾಗಿ ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್ ಸ್ಥಾನಗಳಿಗೆ ಸಲ್ಲಿಸಿದೆ.
ವಿರೋಧ ಪಕ್ಷದ ಸ್ಥಾನದಲ್ಲಿ ಇರುವ ಪಾಕಿಸ್ತಾನ ಮುಸ್ಲೀಂ ಲೀಗ್ (ಕ್ಯೂ) ಮತ್ತು ಮಿತ್ರ ಪಕ್ಷಗಳು ಸರ್ದಾರ್ ಮುಹ್ಮದ್ ಇಸ್ರಾರ್ ಮತ್ತು ಖುಷ್ಬಕ್ತ್ ಶುಜಾತ್‌ರನ್ನು ನ್ಯಾಷನಲ್ ಅಸೆಂಬ್ಲಿಯ ಸ್ಪೀಕರ್ ಮತ್ತು ಉಪಸಭಾಪತಿ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಯನ್ನಾಗಿಸಿದೆ.
|