ಭಾರತ ಸರಕಾರವು ಕೂಡ ಮೂಲಭೂತವಾದಿಗಳಿಗಿಂತ ಭಿನ್ನವೇನಲ್ಲ. ನಾಲ್ಕು ತಿಂಗಳ ಅವಧಿಯಲ್ಲಿ ಹೆಚ್ಚು ಕಾಲ ನಾನು ಮಾನಸಿಕ ಒತ್ತಡದಲ್ಲಿದ್ದೆ. ಭಾರತ ಸರಕಾರದ ನಿಗಾದಲ್ಲಿ ನಾನು ಇರುವುದರಿಂದ ಈ ಕುರಿತು ಹೆಚ್ಚಿಗೆ ಮಾತನಾಡಿದಲ್ಲಿ ತನ್ನ ಸುರಕ್ಷೆ ಅಪಾಯಕ್ಕೆ ಸಿಲುಕಬಹುದು ಎಂದು ವಿವಾದಿತ ಬಾಂಗ್ಲಾ ಲೇಖಕಿ ತಸ್ಲೀಮಾ ನಸ್ರೀನ್ ವಿವಾದಾತ್ಮಕ ಹೇಳಿಕೆಯನ್ನು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ್ದಾರೆ.
ವೈದ್ಯಕೀಯ ಚಿಕಿತ್ಸೆಗೆ ಭಾರತವನ್ನು ತೊರೆದ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರು ಲಂಡನ್‌ನ ಹಿಥ್ರೂ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದು ಈ ಸಂದರ್ಭದಲ್ಲಿ ಅವರು ತಾವು ತೆರಳಲಿರುವ ದೇಶದ ಹೆಸರನ್ನು ಹೇಳಲು ನಿರಾಕರಿಸಿದರು.
ಈಗಾಗಲೇ ಸಾರ್ವಜನಿಕವಾಗಿ ಗುರುತು ಸಿಗುವಂತಹ ವ್ಯಕ್ತಿಯಾಗಿರುವುದರಿಂದ ನಾನು ವಾಸವಿರುವ ಸ್ಥಳದ ಮಾಹಿತಿ ನೀಡಿದಲ್ಲಿ ಜೀವಕ್ಕೆ ಗಂಡಾಂತರ ಇದೆ ಎಂದು ಹೇಳಿದರು.
ಒಂದು ಹಂತದಲ್ಲಿ ಭಾರತೀಯ ಸರಕಾರವನ್ನು ಟೀಕಿಸಿದ ಅವರು ಮೂಲಭೂತವಾದಿಗಳಿಂದ ಅದೇನು ಭಿನ್ನವಲ್ಲ ಎಂದರು. ತಸ್ಲೀಮಾ ನಸ್ರೀನ್ ಅವರಿಗೆ ಹೃದ್ರೋಗದ ಸಮಸ್ಯೆ ಕಾಡುತ್ತಿದ್ದು ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ವ್ಯವಸ್ಥೆ ಕಲ್ಪಿಸುವುದಾಗಿ ಅಂತಾರಾಷ್ಟ್ರೀಯ ಲೇಖಕರ ಸಂಘಟನೆ ಸ್ವೀಡನ್ ವಿಭಾಗದ ಉಪಾಧ್ಯಕ್ಷ ಸ್ವೇಂಸ್ಕಾ ಪೆನ್ ಹೇಳಿದರು.
|