ಶಕ್ತಿಯುತ ಸಾಗರ ಮಧ್ಯದ ಸ್ಫೋಟ ಲಂಕಾದ ನೌಕಾದಳದ ಯುದ್ಧ ಹಡಗೊಂದನ್ನು ಹಾನಿಗೊಳಿಸಿದ್ದು, ಅದರಲ್ಲಿದ್ದ ಕನಿಷ್ಟ 10 ಮಂದಿ ನೌಕಾ ಅಧಿಕಾರಿಗಳು ಕಣ್ಮರೆಯಾಗಿದ್ದಾರೆ. ಈ ಹಡಗು ಮುಲ್ಲೈತಿವುನಲ್ಲಿನ ನಯರು ಪ್ರದೇಶದಲ್ಲಿ ಸಂಚರಿಸುತ್ತಿತ್ತು ಎಂದು ನೌಕಾ ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ 2.30ಕ್ಕೆ ನಯರು ಸಮುದ್ರದಲ್ಲಿ ಕ್ಷಿಪ್ರ ದಾಳಿ ಹಡಗು (ಎಪ್ಎಸಿ) ಒಂದು ಸಾಗರದಲ್ಲಿ ಹುದುಗಿಸಿಟ್ಟಿದ್ದ ಸ್ಫೋಟಕಗಳಿಗೆ ಗುರಿಯಾಯಿತು. ಇದರಲ್ಲಿದ್ದ 10 ನಾವಿಕರು ಕಣ್ಮರೆಯಾಗಿದ್ದು, ಇತರ ಆರು ಮಂದಿಯನ್ನು ರಕ್ಷಿಸಲಾಗಿದೆ ಎಂದು ನೌಕಾ ವಕ್ತಾರ ಕಮಾಂಡರ್ ದಾಸನಾಯಕೆ ತಿಳಿಸಿದ್ದಾರೆ.
ಆದರೆ ಎಲ್‌ಟಿಟಿಇ ಪರ ವೆಬ್‌ಸೈಟ್‌ವೊಂದು ಎಲ್‌ಟಿಟಿಇ ಮೂಲಗಳನ್ನು ಉಲ್ಲೇಖಿಸುತ್ತಾ, ಸಂಘಟನೆಯ ಬ್ಲ್ಯಾಕ್ ಸೀ ಟೈಗರ್ ಗಂಪು ಮುಲ್ಲೈಟಿವು ಸಮೀಪದ ಸಮುದ್ರ ಪ್ರದೇಶದಲ್ಲಿ ಶ್ರೀಲಂಕಾ ನೌಕಾ ದಳದೊಂದಿಗೆ ಮುಖಾಮುಖಿ ನಡೆಸಿದ್ದು, ನೌಕಾ ಪಡೆಯ ಎಪ್ಎಸಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ವರದಿ ಮಾಡಿದೆ.
ಪ್ರಾರಂಭಿಕ ವರದಿಯ ಪ್ರಕಾರ ಈ ಮುಖಾಮುಖಿಯಲ್ಲಿ ಮೂವರು ತಮಿಳು ಉಗ್ರರು ಸಾವಿಗೀಡಾಗಿದ್ದಾರೆ ಎಂದು ತಮಿಳ್‌ನೆಟ್‌ನಲ್ಲಿ ವರದಿಯಾಗಿದೆ. ಮತ್ತು ಈ ಘರ್ಷಣೆ ಇನ್ನೂ ಮುಂದುವರಿದಿದೆ ಎಂದು ತಿಳಿಸಿದೆ.
ಆದರೆ ಶ್ರೀಲಂಕಾ ನೌಕಾ ಪಡೆಯ ವಕ್ತಾರ ಎಲ್‌ಟಿಟಿಇಯ ಈ ಹೇಳಿಕೆಯನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಎಲ್‌ಟಿಟಿಇ ಜತೆ ಯಾವುದೇ ಘರ್ಷಣೆಯಾಗಿಲ್ಲ ಆದ್ದರಿಂದ ತಾವು ಈ ವರದಿಗಳನ್ನು ಅಲ್ಲಗಳೆಯುತ್ತೇವೆ. ಈ ಪ್ರದೇಶದಲ್ಲಿ ತಮಿಳು ಉಗ್ರರ ಯಾವುದೇ ಹಡಗು ಕಂಡುಬಂದಿಲ್ಲ ಎಂದು ದಸಾನಾಯಕೆ ತಿಳಿಸಿದ್ದಾರೆ.
ಸಂಭಾವ್ಯ ಬದುಕುಳಿದವರನ್ನು ರಕ್ಷಿಸಲು ಆ ಪ್ರದೇಶದಲ್ಲಿ ತೀವ್ರಗತಿಯ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
|