ಸ್ಥಗಿತಗೊಂಡಿರುವ ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಅಣು ಒಪ್ಪಂದಕ್ಕೆ ಸಂಬಂಧಪಟ್ಟಂತೆ ದ್ವಿಪಕ್ಷೀಯ ಮಾತುಕತೆಗಳನ್ನು ಪುನರಾರಂಭಿಸುವುದಕ್ಕೆ ಭಾರತೀಯ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಅಮೆರಿಕಕ್ಕೆ ಆಗಮಿಸಿದ್ದು, ಅವರು ಅಮೆರಿಕದ ರಾಜ್ಯ ಕಾರ್ಯದರ್ಶಿ ಕೊಂಡೊಲಿಸಾ ರೈಸ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಮುಖರ್ಜಿ ಅವರೊಂದಿಗೆ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ ಮೇನನ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಅಮೆರಿಕ ಪ್ರವಾಸಕ್ಕೆ ತೆರಳಿದ್ದು, ಶ್ವೇತ ಭವನದಲ್ಲಿ ಅಮೆರಿಕದ ರಾಷ್ಟ್ರೀಯ ಸಲಹಾಗಾರ ಸ್ಟೀಫನ್ ಹ್ಯಾಡ್ಲಿ ಅವರೊಂದಿಗೆ ಇತರ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಪ್ರಣಬ್ ಮುಖರ್ಜಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. 2005ರಲ್ಲಿ ಅಂದಿನ ವಿದೇಶಾಂಗ ಖಾತೆ ಸಚಿವ ನಟ್ವರ್ ಸಿಂಗ್ ಅಮೆರಿಕ ಪ್ರವಾಸ ಕೈಗೊಂಡು ಅಧ್ಯಕ್ಷ ಜಾರ್ಜ್ ಬುಷ್ ಅವರೊಂದಿಗೆ ಮಾತುಕತೆ ನಡೆಸಿದ್ದರು.
ಅಂತಾರಾಷ್ಟ್ರೀಯ ಅಣು ಶಕ್ತಿ ಪ್ರಾಧಿಕಾರ ಮತ್ತು ಭಾರತದ ನಡುವೆ ಅಣು ತಂತ್ರಜ್ಞಾನ ಮತ್ತು ಅಣು ಸ್ಥಾವರಗಳಿಗೆ ಸಂಬಂಧಿಸಿದಂತೆ ಮಾಡಿಕೊಳ್ಳಲಾಗುವ ಒಪ್ಪಂದದ ಕರಡು ಪ್ರತಿ ಸಿದ್ದವಾದ ನಂತರ ಮುಖರ್ಜಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿರುವುದು ಭೇಟಿಗೆ ಮಹತ್ವ ತಂದಿದೆ.
ಇದಕ್ಕೂ ಮುನ್ನ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಣಬ್ ಮುಖರ್ಜಿ ಅವರು ನಾಗರಿಕ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ನಾವು ಹಿಂದೆಯೂ ಸರಿಯಲಾರದಂತಹ ಪರಿಸ್ಥಿತಿಯಲ್ಲಿ ಇದ್ದೇವೆ. ಆದರೂ ಸರಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿರುವ ಎಡಪಕ್ಷಗಳ ಬೆಂಬಲ ಇಲ್ಲದೇ ಒಪ್ಪಂದಕ್ಕೆ ಸರಕಾರ ಸಹಿ ಹಾಕುವುದಿಲ್ಲ ಎಂದು ಹೇಳಿದ್ದರು.
|