ಹೆಸರಲ್ಲೇನಿದೆ ಎಂಬ ಪ್ರಶ್ನೆಯನ್ನು ಅಲ್ಲಲ್ಲಿ ಕೇಳಿ ಕೇಳಿ ಸಾಕಾಗಿದೆಯೇ? ಅದಕ್ಕೊಂದು ಉತ್ತರ ಕಂಡುಹುಡುಕಲಾಗಿದೆ. ಅಧ್ಯಯನವೊಂದರ ಪ್ರಕಾರ, ಪ್ರಖ್ಯಾತಿ ಮತ್ತು ಪ್ರಸಿದ್ಧಿ ಈ ಹೆಸರೆಂಬ ಮಾಯೆಯಲ್ಲಿದೆ!
ಯಶಸ್ಸು ಮತ್ತು ಅಪಕೀರ್ತಿಗಳಿಗೆ ಹೆಸರೇ ಕಾರಣವೆಂದು ನಂಬುವವರು ಹೆಚ್ಚಾಗುತ್ತಿದ್ದಾರೆ ಎಂಬುದನ್ನು ಬ್ರಿಟನ್‌ನ ಹರ್ಟ್‌ಫರ್ಡ್‌ಶೈರ್ ಯುನಿವರ್ಸಿಟಿ ಸಂಶೋಧಕರು ಕಂಡುಕೊಂಡಿದ್ದಾರೆ.
ದಿ ಟೈಮ್ಸ್ ವರದಿ ಪ್ರಕಾರ, 6500 ಮಂದಿಯನ್ನು ಈ ಕುರಿತು ಸಂಶೋಧಕರು ಸಮೀಕ್ಷೆಗೊಳಪಡಿಸಿದ್ದರು. ಜೇಮ್ಸ್ ಮತ್ತು ಎಲಿಜಬೆತ್ ಮುಂತಾದ ಹೆಸರುಗಳು ಅತ್ಯಂತ ಯಶಸ್ವಿ ಎಂಬ ನಂಬಿಕೆ ವ್ಯಕ್ತವಾಗಿದ್ದರೆ, ರಿಯಾನ್ ಮತ್ತು ಸೋಫೀ ಎಂಬ ಹೆಸರುಗಳು ಆಕರ್ಷಕವಾಗಿರುತ್ತವೆ ಮತ್ತು ಜ್ಯಾಕ್ ಮತ್ತು ಲೂಸಿ ಹೆಸರುಗಳಂತೂ ದುರದೃಷ್ಟ ತರುವಂಥವು ಎಂಬುದು ಸಮೀಕ್ಷೆಯಲ್ಲಿ ವ್ಯಕ್ತವಾದ ಅಭಿಪ್ರಾಯ.
ಹೀಗಾಗಿ, ತಮ್ಮ ಮಕ್ಕಳಿಗೆ ಹೆಸರಿಡಲು ಹೊರಟಿರುವ ಹೆತ್ತವರಿಗೆ ಈ ಸಂಶೋಧಕರಿಂದ ಒಂದು ಸಲಹೆ ದೊರೆತಿದೆ. ಅದೆಂದರೆ 'ರಾಜಮನೆತನಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಹೆಸರುಗಳು ಯಶಸ್ಸು ಮತ್ತು ಚಾಣಾಕ್ಷತೆಯ ಪ್ರತೀಕ ಎಂದು ನಂಬಲಾಗುತ್ತಿರುವುದರಿಂದ ಯಶಸ್ವೀ ಕರುಳಿನ ಕುಡಿಗಾಗಿ ಹಪಹಪಿಸುವ ತಂದೆ ತಾಯಂದಿರು ಚಿತ್ರ ವಿಚಿತ್ರ ಹೆಸರುಗಳಿಡುವುದರಿಂದ ದೂರವಿರಿ'!
ಅವರು ಕಂಡುಕೊಂಡಿರುವ ಸಂಶೋಧನೆ ಪ್ರಕಾರ, ಹುಡುಗಿಯರ ಆಕರ್ಷಕ ಹೆಸರುಗಳು ಕೇಳಲು ಮಧುರವಾಗಿ, 'ಈ'ಕಾರದಲ್ಲಿ ಅಂತ್ಯವಾಗುತ್ತವಾದರೆ, ಸೆಕ್ಸೀ ಹುಡುಗರ ಹೆಸರುಗಳು ಚಿಕ್ಕದಾಗಿ ಮತ್ತು ಕೇಳಲು ಒರಟಾಗಿಯೂ ಇರುತ್ತವೆ ಎಂದಿದ್ದಾರೆ ಪ್ರಧಾನ ಸಂಶೋಧಕ ಪ್ರೊ.ರಿಚರ್ಡ್ ವೈಸ್‌ಮನ್.
|