ಲಿಯೋನಿಡ್ ಸ್ಟಾಡ್ನಿಕ್‌ನ ಎತ್ತರ ತನ್ನ ಇಷ್ಟದ ಕೆಲಸವನ್ನೇ ಬಿಡುವಂತೆ ಮಾಡಿದೆ. ಆತನ ಗ್ರಾಮದ ಮನೆಯಲ್ಲಿ ಹಾಗೂ ಸುತ್ತಮುತ್ತಲ ಬಗ್ಗಿಕೊಂಡೇ ಓಡಾಡಬೇಕು ಎನ್ನುವಂತೆ ಮಾಡಿದೆ. ಆತ ಯಾವುದೇ ಕಾರ್‌ನಲ್ಲಿಯೇ ಆಗಲೀ ಬಸ್‌ನಲ್ಲಿಯೇ ಆಗಲೀ ಪ್ರಯಾಣಿಸಲಂತೂ ಸಾಧ್ಯವಿಲ್ಲ.
ಆದರೆ ಸ್ಟಾಡ್ನಿಕ್, ಜಗತ್ತಿನ ಅತಿ ಎತ್ತರದ ಮನುಷ್ಯ ಎಂದು ಗಿನ್ನೆಸ್ ದಾಖಲೆಗೆ ಪಾತ್ರನಾಗಿರುವ ವ್ಯಕ್ತಿ ಹೇಳುವುದೇನೆಂದರೆ, ಜಗತ್ತು ಕರುಣಾಮಯಿಗಳಿಂದಲೇ ತುಂಬಿದೆ. ತನ್ನ ಪರಿಸ್ಥಿತಿಯನ್ನು ಅರಿತ ಬಹಳಷ್ಟು ಮಂದಿ ತನಗೆ ಸಹಾಯ ಮಾಡುತ್ತಾರೆ ಎಂದು ಹೇಳುತ್ತಾನೆ.
ನಾಲ್ಕು ವರ್ಷದ ಹಿಂದೆ ಉಕ್ರೇನ್‌ನ ದಾಖಲೆ ಕಾಯ್ದಿಡುವ ಸಂಸ್ಥೆಗಳು ಈತನನ್ನು ಗುರುತಿಸಿದವು ಹಾಗೂ ಕಳೆದ ವರ್ಷ ಗಿನ್ನೆಸ್ ಬುಕ್ ಗುರುತಿಸಿತು. ತನಗೆ ದೊಡ್ಡ ಸೈಜಿನ ಬಟ್ಟೆಗಳನ್ನು, ತನ್ನ ಮನೆಗೆ ನಿರಂತರ ನೀರು ಸೌಲಭ್ಯವನ್ನು ಹಾಗೂ ತೀರಾ ಇತ್ತೀಚೆಗೆ ಬೃಹತ್ ಗಾತ್ರದ ಸೈಕಲನ್ನು, ತನ್ನ ಸುತ್ತ ಮುತ್ತಲಿನ ಮಂದಿ ನೀಡಿದ್ದಾರೆಂದು ಆತ ತಿಳಿಸಿದ್ದಾನೆ.
ನನಗೆ ಬಟ್ಟೆ ಹಾಗೂ ಷೂಗಳನ್ನು ನೀಡಿ ಸಹಕರಿಸುವ ಮಂದಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎನ್ನುತ್ತಾನೆ 37ವರ್ಷದ ಈ ಮಾಜಿ ಪಶುತಜ್ಞ. ಈತ ಈಗಲೂ ಸಹ ತನ್ನ 66 ವರ್ಷದ ತಾಯಿಯೊಂದಿಗೆ ವಾಸಿಸುತ್ತಾನೆ.
2006ರಲ್ಲಿ ಸ್ಟಾಡ್ನಿಕ್‌ನ ಎತ್ತರವನ್ನು ಅಧಿಕೃತವಾಗಿ ಅಳತೆ ಮಾಡಲಾಯಿತು. ಆಗ ಈತನ ಎತ್ತರ 2.57 ಮೀ.(8 ಅಡಿ 5ಇಂಚು). ಆಗ ಎತ್ತರವಾಗಿದ್ದ ಟೀನಾದ ವ್ಯಕ್ತಿಯನ್ನು ಹಿಂದಿಕ್ಕಿದ್ದ. ಈತನ ಬೆಳವಣಿಗೆ, ಈತನ 14ನೇ ವರ್ಷದಲ್ಲಿ ಮಿದುಳಿನ ಆಪರೇಷನ್ ಆದಾಗಿನಿಂದ ಶುರುವಾಯಿತು. ಆಗ ಗ್ರೋಥ್ ಹಾರ್ಮೋನಿನ ಅತಿಯಾದ ಉತ್ಪಾದನೆಯಿಂದ ಈ ಆಕಸ್ಮಿಕ ಸಂಭವಿಸಿತು. ಈ ಬೆಳವಣಿಗೆಯಿಂದಾಗಿ ಬಾಲ್ಯ ಮುರುಟಿಹೋಯ್ತು ಎನ್ನುತ್ತಾನೆ ಈತ.
ಸದ್ಯದ ಈತನ ತೂಕ 200 ಕಿಲೋ. ಇದು ಕೆಲವೊಮ್ಮೆ ಕಾಲುನೋವಿಗೆ ಕಾರಣವಾಗುತ್ತದೆ. ಇದೇ ಕಾರಣದಿಂದ ಆ ಅವಧಿಯಲ್ಲಿ ಊರುಗೋಲಿನ ಸಹಾಯದಿಂದ ನಡೆಯಬೇಕಾಗುತ್ತದೆ. ಈ ಸಂದರ್ಭದಲ್ಲಿ ತನ್ನ 43 ಸೆಂ.ಮೀ. (17 ಇಂಚು) ಷೂವನ್ನು ಕಳಚಿಡಬೇಕಾಗುತ್ತದೆ. ಇದರಿಂದಾಗಿಯೇ ಈತನಿಗೆ ಬೈಸಿಕಲ್ ಒಂದನ್ನು ಗ್ರಾಮದವರೆಲ್ಲರೂ ಸೇರಿ ಕೊಟ್ಟಿದ್ದಾರೆ.
ಇತ್ತೀಚೆಗೆ ಕಂಪ್ಯೂಟರ್ ಕಲಿತುಕೊಳ್ಳುತ್ತಿರುವ ಈತ ಇಂಗ್ಲೀಷ್ ಕೂಡ ಕಲಿತುಕೊಳ್ಳುತ್ತಿದ್ದಾನೆ. ಪ್ರಾಣಿಗಳನ್ನು ಅತಿಯಾಗಿ ಪ್ರೀತಿಸುವ ಈತ, ತನ್ನನ್ನು ಪ್ರೀತಿಸುವ ಜೀವಕ್ಕಾಗಿ ಕಾದಿದ್ದಾನೆ.
|