ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಪಿಪಿಪಿ ಪಕ್ಷದ ಯೂಸುಫ್ ರಾಜಾ ಗಿಲಾನಿ, ತನ್ನ ಪ್ರಪ್ರಥಮ ರಾಜನೀತಿ ಹೇಳಿಕೆಯಲ್ಲಿ ಕಾಶ್ಮೀರ ನೀತಿಯ ಕಹಳೆಯೂದಿದ್ದಾರೆ.
ಕಾಶ್ಮೀರ ಜನತೆಯ 'ತ್ಯಾಗ'ವು ವ್ಯರ್ಥವಾಗುವುದಿಲ್ಲ ಮತ್ತು ದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ ಈ ಸಮಸ್ಯೆಯ ಪರಿಹಾರದ ವೇಳೆ ಅವರ 'ಅಶೋತ್ತರ'ಗಳನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.
ಪಾಕಿಸ್ತಾನದ ರಾಷ್ಟ್ರೀಯ ಅಸ್ಸೆಂಬ್ಲಿಯಲ್ಲಿ ಹಿಂದೆಂದೂ ಕಾಣದಂತಹ ಅಭೂತಪೂರ್ವ ಮಾದರಿಯಲ್ಲಿ ವಿಶ್ವಾಸಮತ ಗಳಿಸಿದ ಬಳಿಕ ಮಾತನಾಡುತ್ತಾ, ಭಯೋತ್ಪಾದನೆಯನ್ನು ತೊಡೆದು ಹಾಕುವುದು ತನ್ನ ಸರಕಾರದ 'ಪ್ರಥಮ ಆದ್ಯತೆ' ಎಂದು ನುಡಿದರು. ಅಲ್ಲದೆ, ಶಸ್ತ್ರಾಸ್ತ್ರ ತ್ಯಜಿಸಲು ಸಿದ್ಧರಾಗಿರುವ ಭಯೋತ್ಪಾದಕರಿಗೆ ಮಾತುಕತೆಯ ಆಹ್ವಾನವನ್ನು ನೀಡಿದರು.
"ನಿಮ್ಮ ತ್ಯಾಗಬಲಿದಾನಗಳು ವ್ಯರ್ಥವಾಗುವುದಿಲ್ಲ" ಎಂಬ ಭರವಸೆಯನ್ನು ಕಾಶ್ಮೀರದ ಸಹೋದರ ಸಹೋದರಿಯರಿಗೆ ಈ ಸಂದರ್ಭದಲ್ಲಿ ತಾನು ನೀಡಲಿಚ್ಛಿಸುವುದಾಗಿ, ಭಾರತದೊಂದಿಗೆ ಮಾತುಕತೆಯನ್ನು ಮುಂದುವರಿಸುವ ವಾಗ್ದಾನ ನೀಡಿದ ವೇಳೆ 55ರ ಹರೆಯದ ಪ್ರಧಾನಿ ಗಿಲಾನಿ ನುಡಿದರು.
ಕಾಶ್ಮೀರ ವಿವಾದ ಇತ್ಯರ್ಥ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ನುಡಿದ ಅವರು ಕಾಶ್ಮೀರ ಜನತೆಯ ಆಶೋತ್ತರಗಳಂತೆ ಸಮಸ್ಯೆ ಪರಿಹಾರವಾಗುವುದೆಂಬುದು ಗ್ರಹಿಕೆಯಾದಲ್ಲಿ ಮಾತ್ರ ವಿಶ್ವಾಸವೃದ್ಧಿ ಕ್ರಮಗಳು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು.
ಗಿಲಾನಿಯವರ ಈ ಹೇಳಿಕೆ ಪಿಪಿಪಿ ಸಹ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿಯವರ ಇತ್ತೀಚಿನ ಹೇಳಿಕೆಗೆ ತದ್ವಿರುದ್ಧವಾಗಿದೆ. ಭಾರತದೊಂದಿಗಿನ ಸಂಬಂಧ ಸುಧಾರಿಸಲು ಇತರ ವಿಚಾರಗಳತ್ತ ಗಮನಹರಿಸುವುದಾಗಿ ಮತ್ತು ಕಾಶ್ಮೀರ ವಿಚಾರವನ್ನು ಬದಿಗಿರಿಸುವುದಾಗಿ ಜರ್ದಾರಿ ನೀಡಿದ್ದ ಹೇಳಿಕೆಗೆ ಪಾಕಿಸ್ತಾನದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.
ನೆರೆಹೊರೆಯ ರಾಷ್ಟ್ರಗಳೊಂದಿಗೆ ಶಾಂತಿ ಮತ್ತು ಭ್ರಾತೃತ್ವಕ್ಕಾಗಿ ಕಾರ್ಯನಿರ್ವಹಿಸುವುದಾಗಿ ಅವರು ತನ್ನ ಹೊಸ ಸರಕಾರದ ವಿದೇಶಾಂಗ ನೀತಿಯ ಕುರಿತು ತಿಳಿಸಿದರು.
|