ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಸರ್ಬಜಿತ್ ಕುಟುಂಬವನ್ನು ಭೇಟಿ ಮಾಡುವುದಲ್ಲದೇ ಭಾರದ ಜೈಲಿನಲ್ಲಿರುವ ಪಾಕ್ ಕೈದಿಗಳ ಬಿಡುಗಡೆಗೆ ಮನವಿ ಮಾಡಲು ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತರು ಹಾಗೂ ಮಾಜಿ ಸಚಿವರಾದ ಅನ್ಸಾರಿ ಭಾರತಕ್ಕೆ ಆಗಮಿಸಿದ್ದಾರೆ.
ಪ್ರಸ್ತುತ ಬುರ್ನಿ ಪಂಜಾಬ್‌ನ ಅಮೃತಸರ್‌ದಲ್ಲಿದ್ದು, ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರನ್ನು ಭೇಟಿ ಮಾಡಿ ಪಂಜಾಬ್ ಜೈಲಿನಲ್ಲಿರುವ 46 ಪಾಕ್ ಕೈದಿಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ಅಹ್ವಾನದ ಮೇರೆಗೆ ಮಾಜಿ ಮಾನವ ಹಕ್ಕುಗಳ ಖಾತೆ ಸಚಿವ ಅನ್ಸಾರಿ ಬುರ್ನಿ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ.
ಪಾಕ್ ಜೈಲಿನಲ್ಲಿದ್ದ ಕಾಶ್ಮಿರ್‌ಸಿಂಗ್ ಅವರನ್ನು ಅನ್ಸಾರಿ ಬಿಡುಗಡೆಗೊಳಿಸಿದ ನಂತರ ಪ್ರಚಾರದ ಮುಂಚೂಣಿಯಲ್ಲಿದ್ದ ಅನ್ಸಾರಿ ಸರ್ಬಜಿತ್ ಪ್ರಕರಣದಲ್ಲಿ ತಮ್ಮಿಂದಾದ ಸಹಾಯವನ್ನು ಮಾಡುವುದಾಗಿ ಹೇಳಿಕೆ ನೀಡಿದ್ದರು. ಸರ್ಬಜಿತ್‌ಸಿಂಗ್‌ನನ್ನು ಪಾಕ್ ನ್ಯಾಯಾಲಯ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ್ದಾನೆಂದು ತೀರ್ಪು ನೀಡಿ ಎಪ್ರೀಲ್ 1ರಂದು ಗಲ್ಲಿಗೇರಿಸುವಂತೆ ಆದೇಶ ನೀಡಿತ್ತು. ಆದರೆ ಪಾಕ್ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ರಿಯಾಯಿತಿ ತೋರಿದ ಹಿನ್ನೆಲೆಯಲ್ಲಿ ಎಪ್ರೀಲ್ 30ಕ್ಕೆ ಮುಂದೂಡಲಾಗಿದೆ.
ಸರ್ಬಜಿತ್ ಸಹೋದರಿ ದಲ್‌ಬೀರ್ ಕೌರ್, ತಮ್ಮ ಕುಟುಂಬ ಪಾಕ್ ನ್ಯಾಯಾಲಯದಲ್ಲಿಸರ್ಬಜಿತ್ ಸಿಂಗ್ ನಿರಪರಾಧಿಯಾಗಿದ್ದು ಬಿಡುಗಡೆ ಮಾಡುವಂತೆ ಕೋರಿ ಮತ್ತೊಂದು ಅಹವಾಲು ಸಲ್ಲಿಸುವುದಾಗಿ ಹೇಳಿಕೆ ನೀಡಿದ್ದರು. ಆದರೆ ಬುರ್ನೆ ಅವರು ಭಾರತಕ್ಕೆ ತಾವು ಭೇಟಿ ನೀಡಿದಾಗ ಕುಟುಂಬದ ಎಲ್ಲ ಸದಸ್ಯರಿಗೆ ಪಾಕ್ ವೀಸಾದ ವ್ಯವಸ್ಥೆ ಮಾಡುವುದಾಗಿ ದೂರವಾಣಿ ಮೂಲಕ ಅಶ್ವಾಸನೆ ನೀಡಿ ಸರ್ಬಜಿತ್ ಅಮಾಯಕ ಎನ್ನಲು ಸಾಕ್ಷಾಧಾರಗಳನ್ನು ಸಂಗ್ರಹಿಸುವಂತೆ ಹೇಳಿದ ಹಿನ್ನೆಲೆಯಲ್ಲಿ ದಲ್‌ಬೀರ್ ಕೌರ್ ತಮ್ಮ ಪಾಕಿಸ್ತಾನಕ್ಕೆ ತೆರಳುವುದನ್ನು ಮುಂದೂಡಿದರು.
ದೆಹಲಿಗೆ ಭೇಟಿ ನೀಡಿ ಸರಕಾರದ ಉನ್ನತ ಮಟ್ಟದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ದೇಶದಲ್ಲಿರುವ ಪಾಕ್ ಕೈದಿಗಳನ್ನು ಬಿಡುಗಡೆ ಮಾಡುವಂತೆ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಮನವಿ ಮಾಡಲಾಗುವುದು ಎಂದು ಅನ್ಸಾರಿ ಬುರ್ನೆ ತಿಳಿಸಿದ್ದಾರೆ.
|