ದುಬೈ ನಗರದ ಹಳೆಯ ಪಟ್ಟಣದ ಜನನಿಬಿಡ ಮಾರುಕಟ್ಟೆಯಲ್ಲಿ ಉಂಟಾದ ಅಕಸ್ಮಿಕ ಬೆಂಕಿ ಅನಾಹುತದಲ್ಲಿ ಭಾರತೀಯರಿಗೆ ಸೇರಿದ ಅಂಗಡಿಗಳು ನಾಶವಾಗಿವೆ ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಿಗ್ಗೆ ನೈಫ್ ಮಾರುಕಟ್ಟೆಯಲ್ಲಿ ಉಂಟಾದ ಅಕಸ್ಮಿಕ ಬೆಂಕಿ ಅನಾಹುತಕ್ಕೆ 183 ಅಂಗಡಿಗಳು ಆಹುತಿಯಾಗಿದ್ದು, ಭಾರತೀಯರು ಈ ಪ್ರದೇಶದಲ್ಲಿ ರೆಡಿಮೇಡ್, ಟಾಯ್ಸ್, ಗಾರ್ಮೆಂಟ್ಸ್ ವ್ಯಾಪಾರ ಮಾಡುತ್ತಿದ್ದರೆಂದು ಹೇಳಲಾಗಿದೆ
ನೈಫ್ ಮಾರುಕಟ್ಟೆಯಲ್ಲಿ ಹೆಚ್ಚಿನ ಅಂಗಡಿಗಳು ಭಾರತೀಯರಿಗೆ ಹಾಗೂ ಪಾಕಿಸ್ತಾನಿಯರಿಗೆ ಸೇರಿದ್ದು, ಬಂಕಿ ಅನಾಹುತದಲ್ಲಿ ಸರ್ವನಾಶವಾಗಿ ಹೋಗಿದ್ದು, ಮತ್ತೆ ವ್ಯಾಪಾರ ಆರಂಭಿಸಲು ಬಹುದಿನಗಳು ಬೇಕಾಗುತ್ತದೆ ಎಂದು ಅಂಗಡಿಗಳ ಮಾಲೀಕರು ಅಲವತ್ತುಕೊಂಡಿದ್ದಾರೆ.
ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ವೇಣು ರಾಜಾಮೊನಿ ಹಾಗೂ ಬಿ.ಎಸ್ ಮುಬಾರಕ್ ಘಟನಾ ಸ್ಥಳವನ್ನು ವೀಕ್ಷಿಸಿ ಅಂಗಡಿಗಳ ಮಾಲೀಕರಿಗೆ ಸ್ವಾಂತನ ಹೇಳಿದ್ದಾರೆ ಎಂದು ರಾಯಭಾರಿ ಕಚೇರಿಯ ಮೂಲಗಳು ತಿಳಿಸಿವೆ.
ನೈಫ್ ಮಾರುಕಟ್ಟೆಗೆ ಅಗ್ನಿಶಾಮಕದಳವನ್ನು ರವಾನಿಸಲಾಗಿದೆ ಎಂದು ತಾಂತ್ರಿಕ ಕಾರ್ಯಾಚರಣೆ ಇಲಾಖೆ ಮುಖ್ಯಸ್ಥ ಜಮೀಲಾ ಅಲ್ ಜಬಿ ಗಲ್ಫ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಘಟನೆಯಲ್ಲಿ 8 ಮಂದಿ ಹೊಗೆಯ ಪ್ರಭಾವದಿಂದ ಅಸ್ವಸ್ಥರಾಗಿದ್ದು ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ.
|