ತನ್ನ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ನೇಪಾಳ ದೊರೆ ವಿಚಾರಣೆ ಎದುರಿಸಬೇಕು ಮತ್ತು ಅರಮನೆ ತ್ಯಜಿಸಬೇಕು ಎಂದು ಮಾವೋವಾದಿ ನಾಯಕ ಪ್ರಚಂಡ ಹೇಳಿದ್ದಾರೆ. ನೇಪಾಳದಲ್ಲಿ ಎಪ್ರಿಲ್ 10ರಂದು ಮಹಾಚುನಾವಣೆಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರಚಂಡ ಹೇಳಿಕೆ ಹೊರಬಿದ್ದಿದೆ.
ತನ್ನ ಪಕ್ಷದ ಗೆಲವು, ಭಾರತದಲ್ಲಿರುವ ಮಾವೋವಾದಿಗಳಿಗೆ ರಾಜಕೀಯ ಮುಖ್ಯವಾಹಿನಿಗೆ ತೆರಳಲು ಪ್ರೋತ್ಸಾಹ ನೀಡಲಿದೆ ಎಂದೂ ಪ್ರಚಂಡ ಹೇಳಿದ್ದಾರೆ.
ಪ್ರಚಂಡಗೆ ಟೀಕಾಪ್ರಹಾರ ಅಂತಾರಾಷ್ಟ್ರೀಯ ಚುನಾವಣಾ ವೀಕ್ಷಕರು ತನ್ನ ಪಕ್ಷದ ಸೋಲಿಗೆ ಕಾರ್ಯವೆಸಗುತ್ತಿರಬಹುದು ಎಂಬ ಪ್ರಚಂಡ ಹೇಳಿಕೆಗೆ ನೇಪಾಳದ ಆಡಳಿತ ಮೈತ್ರಿಕಟದ ಪ್ರಮುಖ ನಾಯಕರೊಬ್ಬರು ತೀವ್ರವಾಗಿ ಪ್ರತಿಕ್ರಿಯಿಸಿದ್ದು, "ಎಲ್ಲವನ್ನೂ ಫಿತೂರಿ ಎಂಬಂತೆ ನೋಡದಿರಿ ಮತ್ತು ಒಬ್ಬ ಜವಾಬ್ದಾರಿಯುತ ನಾಯಕನಂತೆ ಮಾತನಾಡಿ" ಎಂದು ಹೇಳಿದ್ದಾರೆ.
ಇಲ್ಲಿಗೆ ಸಮೀಪ ಬುಧವಾರ ನಡೆದ ಚುನಾವಣಾ ರಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ನೇಪಾಳ ಕಮ್ಯೂನಿಸ್ಟ್ ಪಕ್ಷದ ಯುಎಂಎನ್ ನಾಯಕ ಮಾಧವ್ ಕುಮಾರ್ ಪ್ರಚಂಡರ ಹೇಳಿಕೆಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಮೆರಿಕವು ಮಾವೋವಾದಿಗಳನ್ನು ಸೋಲಿಸಲು ಚುನಾವಣಾ ವೀಕ್ಷಕರ ಹೆಸರಿನಲ್ಲಿ ತನ್ನ ಜನರನ್ನು ಕಳುಹಿಸಿದೆ ಎಂದು ಆಪಾದಿಸಿದ್ದ ಮಾವೋವಾದಿ ನಾಯಕ, ಅಮೆರಿಕ, ಭಾರತ, ರಾಜಮನೆತನ ಮತ್ತು ಇತರ ಶಕ್ತಿಗಳು ತನ್ನ ಪಕ್ಷದ ವಿರುದ್ಧ ಫಿತೂರಿ ನಡೆಸುತ್ತಿವೆ ಎಂದು ದೂರಿದ್ದರು.
|