ನಿಷೇಧಿತ ಎಲ್‌ಟಿಟಿಇ ಸಂಘಟನೆಯ ಬಾಂಬ್ ದಾಳಿಗೆ ಶ್ರೀಲಂಕಾ ಹೆದ್ದಾರಿ ಖಾತೆ ಸಚಿವ ಹಾಗೂ ಒಂಬತ್ತು ಮಂದಿ ಭಾನುವಾರ ಬೆಳಿಗ್ಗೆ ಬಲಿಯಾಗಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್‌ಟಿಟಿಇಯ ಅಟ್ಟಹಾಸಕ್ಕೆ ಸಚಿವ ಜೆಯರಾಜ್ ಫೆರ್ನಾಂಡೊಪುಲ್ಲೆ ಅವರು ಬಲಿಯಾಗಿರುವುದಾಗಿ ರಾಷ್ಟ್ರೀಯ ರಕ್ಷಣಾ ವಲಯ ಮಾಧ್ಯಮ ಕೇಂದ್ರದ ನಿರ್ದೇಶಕ ಲಕ್ಷ್ಮಣ್ ಹುಲುಗಾಲ್ಲಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಇಂದು ಬೆಳಿಗ್ಗೆ ಇಲ್ಲಿನ ಗಾಂಪಾ ಜಿಲ್ಲೆಯಲ್ಲಿ ಸಂಭವಿಸಿದ ಈ ಭೀಕರ ಬಾಂಬ್ ಸ್ಫೋಟದಲ್ಲಿ ಹತ್ತು ನಾಗರಿಕರು ಸಾವನ್ನಪ್ಪಿದ್ದು, ಸುಮಾರು 25ಮಂದಿ ಗಾಯಗೊಂಡಿದ್ದಾರೆ. ಸಚಿವ ಜೆಯರಾಜ್ ಫೆರ್ನಾಂಡೊಪುಲ್ಲೆ ಅವರು ಸಾರ್ವಜನಿಕ ಸಮಾರಂಭವೊಂದರಲ್ಲಿ ಭಾಗವಹಿಸಲು ಅಲ್ಲಿಗೆ ತೆರಳಿದ್ದರು.
ಕೊಲೊಂಬೋದಿಂದ ಸುಮಾರು 30ಕಿ.ಮಿ.ದೂರದಲ್ಲಿರುವ ವೇಲಿವೆರಿಯಾ ಸಮೀಪ ನಡೆದ ಸ್ಫೋಟ ಕೃತ್ಯ ನಿಷೇಧಿತ ಎಲ್‌ಟಿಟಿಇಯದ್ದಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ಶಂಕಿಸಿದ್ದಾರೆ.
ಉತ್ತರ ಭಾಗದ ಎಲ್‌ಟಿಟಿಇ ಪ್ರಾಬಲ್ಯದ ಪ್ರದೇಶವನ್ನು ಸೈನಿಕ ಪಡೆ ಮರು ವಶಪಡಿಸಿಕೊಂಡಿದ್ದು, ಕಳೆದ ಎರಡು ದಿನಗಳಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸುಮಾರು 60ಮಂದಿ ಸಾವನ್ನಪ್ಪಿದ್ದರು,ಇದಕ್ಕೆ ಪ್ರತಿಕಾರವಾಗಿ ಎಲ್‌ಟಿಟಿಇ ಈ ದುಷ್ಕೃತ್ಯ ಎಸಗಿದೆ.
ಕಳೆದ 25ವರ್ಷಗಳಿಂದ ಸ್ವತಂತ್ರ ರಾಜ್ಯಕ್ಕಾಗಿ ಹೋರಾಡುತ್ತಿರುವ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಇಳಂನ ರಕ್ತಪಾತಕ್ಕೆ ಒಟ್ಟು 70ಸಾವಿರ ಜನರು ಬಲಿಯಾಗಿದ್ದಾರೆ.
|