ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರು ಸ್ವದೇಶಕ್ಕೆ ಆಗಮಿಸಿದ ವೇಳೆ ನಡೆಸಲಾಗಿದ್ದ ಆತ್ಮಾಹುತಿ ಬಾಂಬ್ ದಾಳಿ ಪ್ರಕರಣದ ತನಿಖೆಗಾಗಿ ಹೊಸ ನ್ಯಾಯಾಧಿಕರಣವನ್ನು ನೇಮಿಸಲಾಗುವುದು ಎಂದು ಹೇಳಿರುವ ಆಡಳಿತಾರೂಢ ಪಿಪಿಪಿಯು, ಸಿಂಧ್ ಮಾಜಿ ಮುಖ್ಯಮಂತ್ರಿ ಅರಬ್ ಗುಲಾಮ್ ರಹೀಮ್ ಅವರು ಶಂಕಿತರಲ್ಲೊಬ್ಬರು ಎಂದು ಹೇಳಿದೆ.
ಸಿಂಧಿ ಪ್ರಾಂತ್ಯದ ಅಸ್ಸಂಬ್ಲಿ ಚುನಾವಣೆಯಲ್ಲಿ ಬಹುಮತಗಳಿಸಿರುವ ಪಿಪಿಪಿಯು ಸರಕಾರ ರಚಿಸಿದ ಬಳಿಕ ನ್ಯಾಯಾಧಿಕರಣವನ್ನು ನೇಮಿಸಲಾಗುವುದು ಎಂದು ಸಿಂಧ್ ಪ್ರಾಂತ್ಯದ ಪಿಪಿಪಿ ಮುಖ್ಯಸ್ಥ ಜುಲ್ಫಿಕರ್ ಅಲಿ ಮಿರ್ಜಾ ಹೇಳಿದ್ದಾರೆ.
ಗಡಿಪಾರಿನ ಬಳಿಕ ಕಳೆದ ಅಕ್ಟೋಬರ್ 18ರಂದು ರಾಷ್ಟ್ರಕ್ಕೆ ಮರಳಿದ ಭುಟ್ಟೋ ಅವರು ತೆರದ ವಾಹದಲ್ಲಿ ಮೆರವಣಿಗೆ ಸಾಗುತ್ತಿದ್ದ ವೇಳೆಗೆ ಎರಡು ಮಾನವ ಬಾಂಬ್‌ಗಳು ಸ್ಫೋಟಗೊಂಡಿದ್ದು, ಈ ವೇಳೆ 140 ಮಂದಿ ಹತರಾಗಿದ್ದು ನೂರಾರು ಮಂದಿ ಗಾಯಗೊಂಡಿದ್ದರು. ಡಿಸೆಂಬರ್‌ನಲ್ಲಿ ರಾವಲ್ಪಿಂಡಿಯಲ್ಲಿ ನಡೆಸಿದ ಚುನಾವಣಾ ರಾಲಿಯಲ್ಲಿ ಭುಟ್ಟೋ ಅವರನ್ನು ಹತ್ಯೆ ಮಾಡಲಾಗಿತ್ತು.
ರಹೀಮ್ ಅವರು ಅವಳಿ ಬಾಂಬ್ ದಾಳಿಯ ಹಿಂದಿನ ದಿನ ಭುಟ್ಟು ಮೆರವಣಿಗೆಯು ಕತ್ತಲಲ್ಲಿ ಅಂತ್ಯಗೊಳ್ಳಲಿದೆ ಎಂಬ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರಕರಣದ ಶಂಕಿತರ ಪಟ್ಚಿಯಲ್ಲಿ ಅವರ ಹೆಸರಿದೆ ಎಂದು ಮಿರ್ಜಾ ಹೇಳಿದ್ದಾರೆ.
|