ಇಲ್ಲಿನ ಸತ್ಯಾಗ್ರಹ ವೇದಿಕೆಯು 'ಗಾಂಧಿ ಪರಂಪರೆ ಮಾಸ'ವನ್ನು ಆರಂಭಿಸಿದ್ದು, ಇದರನ್ವಯ ಮಹಾತ್ಮಾ ಗಾಂಧೀಜಿಯವರ ಅಹಿಂಸೆ, ಶಾಂತಿ ಮತ್ತು ಭ್ರಾತೃತ್ವ ಸಂದೇಶವನ್ನು ಸ್ಮರಿಸಲಾಯಿತು. ಮ್ಯಾನ್‌ಹಟನ್‌ನ ಕೇಂದ್ರೀಯ ಚೌಕದಲ್ಲಿ ಸೇರಿದ ಜನತೆ ಗಾಂಧೀ ಸ್ಮರಣೆ ಮಾಡಿದರು.
ಗಾಂಧೀಜಿಯವರ ಇಷ್ಟದ ಭಜನೆಗಳನ್ನು ಹಾಡಲಾಯಿತು ಮತ್ತು ಸುಮಾರು 200ಕ್ಕೂ ಅಧಿಕ ಮಂದಿ 'ಶಾಂತಿ ದೂತನಿಗೆ' ಗೌರವ ಸಲ್ಲಿಸಿದರು. ಅವರ ಸಂದೇಶಗಳು ಅಂದು ಎಷ್ಟು ಪ್ರಸ್ತುತವಾಗಿತ್ತೋ ಇಂದಿಗೂ ಅಷ್ಟೇ ಪ್ರಸ್ತುತವಾಗಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಅಭಿಪ್ರಾಯಿಸಿದರು.
ದಕ್ಷಿಣ ಆಫ್ರಿಕಾದಲ್ಲಿ ಜನಾಂಗೀಯ ತಾರತಮ್ಯದ ವಿರುದ್ದ ಗಾಂಧೀಜಿಯವರ ಹೋರಾಟವನ್ನು ಪ್ರಸ್ತಾಪಿಸಿದ ಅವರು ಇದು ಆ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮಹತ್ವದ ತಿರುವು ಎಂದು ನುಡಿದರು.
ಇದಕ್ಕೂ ಮುಂಚಿತವಾಗಿ ನಗರದ ನಾಲ್ಕು ದಿಕ್ಕುಗಳಿಗಳಿಂದ, ಗಾಂಧೀಜಿಯವರ ಸಂದೇಶಗಳ ಫಲಕಗಳನ್ನು ಹಿಡಿದಿದ್ದ ಜನರ ಗುಂಪು ಮೆರವಣಿಗೆಯಲ್ಲಿ ತೆರಳಿ ಕೇಂದ್ರೀಯ ಚೌಕದ ಬಳಿ ಜಮಾಯಿಸಿತು.
|