ಸಾವಿರಾರು ನೌಕರರು ಉದ್ಯೋಗಕ್ಕಾಗಿ ಬ್ರಿಟನಿಗೆ ಆಗಮಿಸಿದ ಹಳೆಯ ಯೋಜನೆಯ ಷರತ್ತುಗಳು ಮತ್ತು ನಿಯಮಗಳನ್ನು ಬದಲಾಯಿಸಲು ಸರಕಾರಕ್ಕೆ 'ಮುಕ್ತ ಅವಕಾಶ ಇಲ್ಲ' ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡುವುದರೊಂದಿಗೆ ಬ್ರಿಟನ್ನಿನಲ್ಲಿ ದುಡಿಯುತ್ತಿರುವ ಉನ್ನತ ಕೌಶಲ್ಯದ ಭಾರತೀಯ ನೌಕರರು ವಿಜಯದ ನಗೆ ಬೀರಿದ್ದಾರೆ.
2006ರ ನವೆಂಬರ್ ತಿಂಗಳಲ್ಲಿ ಉನ್ನತ ಕೌಶಲ್ಯದ ವಲಸಿಗರ ಕಾರ್ಯಕ್ರಮ ವೇದಿಕೆ (ಎಚ್ಎಸ್ಎಂಪಿ)ಯ ಮೇಲೆ ಗಂಭೀರ ಪರಿಣಾಮ ಬೀರಬಹುದಾದ ನಿರ್ಬಂಧಾತ್ಮಕ ಬದಲಾವಣೆಗಳ ವಿರುದ್ಧ ಮರುಪರಿಶೀಲನಾ ಅರ್ಜಿಯನ್ನು ಎತ್ತಿ ಹಿಡಿದ ಹೈಕೋರ್ಟ್, 'ಹಳೆಯ ಯೋಜನೆಯು ಸಮಗ್ರವಾದ ಮತ್ತು ಏಕೀಕೃತವಾದ ಕಾರ್ಯಕ್ರಮವಾಗಿತ್ತು' ಎಂದು ತನ್ನ ತೀರ್ಪಿನಲ್ಲಿ ತಿಳಿಸಿದೆ.
ಪೂರ್ವ ನಿರ್ಣಯಿತ ಹಂತಗಳಲ್ಲಿ ಯಾವುದನ್ನು ಅನುಷ್ಠಾನಗೊಳಿಸಬೇಕು ಎಂಬುದರ ಕುರಿತಾಗಿ ಷರತ್ತು ಮತ್ತು ನಿಯಮಾವಳಿಗಳನ್ನು ಬದಲಾಯಿಸಲು ಸರಕಾರಕ್ಕೆ ಮುಕ್ತ ಅವಕಾಶವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಭಾರತೀಯರೇ ಹೆಚ್ಚಾಗಿರುವ ವೈದ್ಯರು, ಎಂಜಿನಿಯರ್‌ಗಳು, ತಂತ್ರಜ್ಞರು ಸೇರಿದಂತೆ ಬ್ರಿಟನ್‌ನಲ್ಲಿ ಕೆಲಸ ಮಾಡುತ್ತಿರುವ ಸುಮಾರು 49 ಸಾವಿರ ಉನ್ನತ ಕೌಶಲ್ಯದ ನೌಕರರನ್ನು ಈ ವೇದಿಕೆಯು ಪ್ರತಿನಿಧಿಸುತ್ತಿದೆ. ಅವರೆಲ್ಲರೂ 2002ರ ಜನವರಿ ತಿಂಗಳಲ್ಲಿ, ಅತ್ಯುನ್ನತ ಮಾನವ ಸಂಪನ್ಮೂಲಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಅನುಷ್ಠಾನಕ್ಕೆ ತಂದ ಅತ್ಯಂತ ಜನಪ್ರಿಯ ಯೋಜನೆಯಡಿ ಬ್ರಿಟನ್‌ಗೆ ಕಾಲಿಟ್ಟಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಪ್ರದರ್ಶಿಸಲು ಬ್ರಿಟನ್‌ನ ವ್ಯವಹಾರ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯವನ್ನು ಹೊಂದಿದ್ದರು.
ಈ ಯೋಜನೆಯ ಅನುಸಾರ, ವಿದ್ಯಾರ್ಹತೆ, ವಯಸ್ಸು, ವೇತನ ಮತ್ತು ಯುಕೆಯಲ್ಲಿನ ಅನುಭವ ಹಾಗೂ ಯುಕೆಯಲ್ಲಿನ ಅಧ್ಯಯನ... ಇತ್ಯಾದಿಗಳ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತಿತ್ತು.
ಆದರೆ ಸರಕಾರವು 2006ರ ನವೆಂಬರ್ ತಿಂಗಳಲ್ಲಿ ಈ ಯೋಜನೆಗೆ ಬದಲಾವಣೆ ತಂದಿತ್ತು. ಅದರ ಪ್ರಕಾರ, ಎಚ್ಎಸ್ಎಂಪಿ ವೀಸಾ ಹೊಂದಿದ್ದವರು, ವೀಸಾ ವಿಸ್ತರಣೆ ಪಡೆಯಬೇಕಿದ್ದರೆ ಅಧಿಕ ವಾರ್ಷಿಕ ಆದಾಯ ಮತ್ತು ಕೆಲವೊಂದು ವಯೋಮಿತಿಗಳನ್ನು ಹೇರಲಾಗಿರುವ ಹೊಸ ಯೋಜನೆಯ ಅನುಸಾರ ಪರೀಕ್ಷೆಗೆ ಮತ್ತೆ ಹಾಜರಾಗಬೇಕಾಗಿತ್ತು.
|