ಪಾಕಿಸ್ತಾನದ ಹೊಸ ಸರಕಾರವು ಕಾಶ್ಮೀರ ವಿವಾದವನ್ನು ಬದಿಗಿರಿಸುವ ಮಾತನ್ನು ತಳ್ಳಿಹಾಕಿದೆ. ಆದರೆ, ಭಾರತದೊಂದಿಗೆ ವ್ಯಾಪಾರದ ಮೂಲಕ 'ಬಿಕ್ಕಟ್ಟು ನಿರ್ವಹಣೆಯಿಂದ ಬಿಕ್ಕಟ್ಟು ಪರಿಹಾರದತ್ತ' ಸಾಗಲು ಸಾಧ್ಯವೆಂದಾದರೆ, ಈ ಕುರಿತ ವ್ಯತ್ಯಸ್ಥ ಮಾರ್ಗವೊಂದನ್ನು ಅನುಸರಿಸಲು ಹಿಂಜರಿಯಲಾರೆವು ಎಂದು ಹೊಸ ಸರಕಾರ ಹೇಳಿದೆ.
ಕಾಶ್ಮೀರ ವಿವಾದವು ಸಮಗ್ರ ಮಾತುಕತೆಯ ಕಾರ್ಯಸೂಚಿಯಲ್ಲಿದೆ. ಶಾಂತಿ, ಭದ್ರತೆ ಮತ್ತು ಸ್ಥಿರತೆಯ ಬಳಿಕ ಕಾಶ್ಮೀರ ವಿಚಾರವು ಪ್ರಮುಖ ವಿಚಾರವಾಗಿದ್ದು, ಅದು ಹಾಗೆಯೇ ಉಳಿಯಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಶಿ ಹೇಳಿದ್ದಾರೆ.
"ವ್ಯಾಪಾರದಂತಹ ವಲಯಗಳತ್ತ ನಮ್ಮ ಪರಸ್ಪರ ಅನುಕೂಲಗಳು ಮತ್ತು ಲಾಭಕ್ಕಾಗಿ ನಾವು ಚಲಿಸಬೇಕಾದ ಅಗತ್ಯವಿದೆ" ಎಂದು ಭಾವಿಸುವುದಾಗಿ ಖುರೇಶಿ ನುಡಿದರು.
ಉಭಯ ರಾಷ್ಟ್ರಗಳ ನಡುವೆ ಅಧಿಕೃತ ವಾಹಿನಿಗಳ ಮೂಲಕ ಶತಕೋಟಿ ಡಾಲರುಗಳಿಗೂ ಅಧಿಕ ದ್ವಿಪಕ್ಷೀಯ ವ್ಯಾಪಾರಗಳು ನಡೆಯುತ್ತಿವೆಯಲ್ಲದೆ, ಈ ಎರಡು ರಾಷ್ಟ್ರಗಳ ನಡುವೆ ಅನೌಪಚಾರಿಕ ವ್ಯಾಪಾರ ವಹಿವಾಟುಗಳೂ ನಡೆಯುತ್ತಿದ್ದು ಇದನ್ನು ಪಾಕಿಸ್ತಾನವು ಬಿಕ್ಕಟ್ಟಿನ ಪರಿಹಾರವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಡಾನ್ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಿದ್ದ ಖುರೇಶಿ, ದ್ವಿಪಕ್ಷೀಯ ವ್ಯಾಪಾರ ವ್ಯವಹಾರವು ಬಿಕ್ಕಟ್ಟು ನಿರ್ವಹಣೆಯಿಂದ ಬಿಕ್ಕಟ್ಟು ಪರಿಹಾರದತ್ತ ಸಾಗುವ ವಾತಾವರಣವನ್ನು ನಿರ್ಮಿಸುತ್ತದೆ ಎಂದಾದಲ್ಲಿ ಈ ಮಾರ್ಗವನ್ನು ಅನುಸರಿಸಲು ನಾವು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.
|